
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಅ.೨೮:ಈ ವರ್ಷದ ಕೊನೆಯ ಚಂದ್ರ ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಧ್ಯರಾತ್ರಿ ೧.೦೫ಕ್ಕೆ ಚಂದ್ರಗ್ರಹಣ ಆರಂಭವಾಗಿ ೨.೨೪ ನಿಮಿಷಕ್ಕೆ ಅಂತ್ಯಗೊಳ್ಳಲಿದೆ. ಒಂದು ತಾಸು ೧೯ ನಿಮಿಷ ಗ್ರಹಣ ಇರಲಿದೆ.ವರ್ಷದ ಕೊನೆಯ ಗ್ರಹಣದ ಬಳಿಕ ದೇಶದಲ್ಲಿ ೨೦೨೫ರ ಸೆ. ೭ ರಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ೨೦೨೨ ನ. ೮ ರಂದು ಗ್ರಹಣ ಸಂಭವಿಸಿತ್ತು.ದೇಶಾದ್ಯಂತ ಚಂದ್ರಗ್ರಹಣ ಗೋಚರಿಸಲಿದೆ. ಇದರ ಜತೆಗೆ ಏಷ್ಯಾ ಖಂಡ ಸೇರಿದಂತೆ ಎಲ್ಲ ಕಡೆಗಳಲ್ಲೂ ಗ್ರಹಣ ವೀಕ್ಷಿಸಬಹುದಾಗಿದೆ.ಅಶ್ವಿನಿ ನಕ್ಷತ್ರದಲ್ಲಿ ಈ ಗ್ರಹಣ ಸಂಭವಿಸಲಿದ್ದು, ೩೦ ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅಪರೂಪದ ವಿಸ್ಮಯಕ್ಕೆ ಇಂದು ರಾತ್ರಿ ಸಾಕ್ಷಿಯಾಗಲಿದೆ. ಗಜಕೇಸರಿ ಯೋಗದಲ್ಲಿ ಗ್ರಹಣ ಸಂಭವಿಸಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.ಹುಣ್ಣಿಮೆಯ ರಾತ್ರಿ ರಾಹು-ಕೇತು ಚಂದ್ರನನ್ನು ಆವರಿಸಲು ಯತ್ನಿಸಿದಾಗ ಚಂದ್ರನ ಮೇಲೆ ಗ್ರಹಣ ಸಂಭವಿಸಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
ದೇವಾಲಯಗಳು ಬಂದ್
ಇಂದು ರಾತ್ರಿ ಚಂದ್ರಗ್ರಹಣ ಸಂಭವಿಸಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ದೇವಾಲಯಗಳು ಸಂಜೆ ಬಳಿಕ ಬಂದ್ ಆಗಲಿವೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ನಿಮಿಷಾಂಭ ದೇವಾಲಯಗಳು ಬಂದ್ ಆಗಲಿವೆ. ರಾಯಚೂರಿನ ಮಂತ್ರಾಲಯ ಮಧ್ಯಾಹ್ನ ೧೨ ಗಂಟೆ ಬಳಿಕ ಬಂದ್ ಆಗಲಿವೆ. ಆದರೆ, ರಾಯರ ದರ್ಶನಕ್ಕೆ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ವಿಶೇಷ ಸೇವಾಕಾಂiiಗಳು ಇರುವುದಿಲ್ಲ. ಚಂದ್ರಗ್ರಹಣ ಪ್ರಯುಕ್ತ ಅನ್ನ ಪ್ರಸಾದವೂ ಸ್ಥಗಿತಗೊಳಿಸಲಾಗಿದೆ.ಚಾಮುಂಡಿಬೆಟ್ಟವು ಬಂದ್ ಆಗಲಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಪೂಜಾ ವಿಧಿ-ವಿಧಾನಗಳು ಎಂದಿನಂತೆ ಇರಲಿವೆ. ಚಂದ್ರಗ್ರಹಣ ಸ್ಪರ್ಶ ಹಾಗೂ ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಇಂದು ರಾತ್ರಿ ಚಾಮುಂಡಿ ದೇವಿಯ ರಥೋತ್ಸವ ರಾತ್ರಿ ಬದಲು ಸಂಜೆ ೫ ಗಂಟೆಗೆ ನಡೆಯಲಿದೆ.
ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ ಹುಣ್ಣಿಮೆ ಪ್ರಯುಕ್ತ ವಿಶೇಷ ಶಾಂತಿ ಪೂಜೆ ನಡೆಯಲಿದೆ. ಈ ಪೂಜೆಯ ಬಳಿಕ ಬನಶಂಕರಿ ದೇವಾಲಯ ೩ ಗಂಟೆಯಿಂದ ಬಂದ್ ಆಗಲಿದೆ. ದೇವಿ ದರ್ಶನಕ್ಕೆ ಅವಕಾಶವಿರುವುದಿಲ್ಲ. ನಾಳೆ ಬೆಳಿಗ್ಗೆ ೪ ಗಂಟೆಗೆ ದೇವಾಲಯ ತೆರೆಯಲಿದೆ. ಮಲ್ಲೇಶ್ವರದಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಸಂಜೆ ೬ ಗಂಟೆ ನಂತರ ಭಕ್ತರಿಗೆ ಪ್ರವೇಶವಿಲ್ಲ.ಗ್ರಹಣದ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೬ ಗಂಟೆಯಿಂದಲೇ ಹೋಮ ನಡೆಸಲಾಯಿತು. ೧೧ ಗಂಟೆಯವರೆಗೂ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ದೇವಾಲಯ ಬಂದ್ ಮಾಡಿ ನಾಳೆ ಬೆಳಿಗ್ಗೆ ೯ ಗಂಟೆಗೆ ದೇವಾಲಯ ತೆರೆಯಲಿದೆ.