ಚಂದ್ರಕಾಂತ ಮುಗಳಿ ವಯೋನಿವೃತ್ತಿ, ಆತ್ಮೀಯ ಬೀಳ್ಕೊಡುಗೆ

ಕಲಬುರಗಿ,ಸೆ.1-ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಲಬುರಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು-ಅಭಿವೃದ್ಧಿ ಮತ್ತು ಅನುಕೂಲ ಕೇಂದ್ರದಲ್ಲಿ ಸುಮಾರು 32 ವರ್ಷಗಳ ಕಾಲ ಎಂ.ಟಿ.ಎಸ್. ನೌಕರರಾಗಿ ಸೇವೆ ಸಲ್ಲಿಸಿದ ಚಂದ್ರಕಾಂತ ಮುಗಳಿ ಅವರು ಗುರುವಾರ ಇಲ್ಲಿ ವಯೋನಿವೃತ್ತಿ ಹೊಂದಿದ್ದರು.
ನಗರದ ಐವಾನ್-ಎ-ಶಾಹಿ ಪ್ರದೇಶದಲ್ಲಿರುವ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಎಸ್.ಎಂ.ಇ ಹುಬ್ಬಳ್ಳಿ ಕಚೇರಿಯ ಮುಖ್ಯಸ್ಥರು ಮತ್ತು ಸಹಾಯಕ ನಿರ್ದೇಶಕ ಬಿ.ಎಸ್.ಜವಳಗಿ ಮತ್ತು ಕಲಬುರಗಿ ಕಚೇರಿಯ ಸಹಾಯಕ ನಿರ್ದೇಶಕಿ ಸುಬ್ಬಲಕ್ಷ್ಮೀ ಸೇರಿದಂತೆ ಕಚೇರಿ ಸಿಬ್ಬಂದಿಗಳು ಚಂದ್ರಕಾಂತ ಮುಗಳಿ ಅವರಿಗೆ ಮೈಸೂರು ಪೇಟ ತೊಡಿಸಿ, ಫಲ ತಾಂಬೂಲ ನೀಡಿ ಸತ್ಕರಿಸಿದರು.
ಚಂದ್ರಕಾಂತ ಮುಗಳಿ ಅವರು 2-3 ವರ್ಷ ಹುಬ್ಬಳ್ಳಿ ಕಚೇರಿ ಬಿಟ್ಟರೆ ದೀರ್ಘಾವಧಿ ಸೇವೆಯನ್ನು ಕಲಬುರಗಿ ಕಚೇರಿಯಲ್ಲಿಯೆ ಸಲ್ಲಿಸಿದ್ದಾರೆ. ಅವರು ಸೇವೆಯುದ್ದಕ್ಕೂ ಎಲ್ಲಾ ಅಧಿಕಾರಿ-ಸಿಬ್ಬಂದಿಗಳೊಂದಿಗೆ ಅನ್ಯೋನ್ಯತೆಯಿಂದ ಮತ್ತು ತುಂಬಾ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ. ಮುಂದಿನ ದಿನದಲ್ಲಿ ಕಚೇರಿ ಕೆಲಸದಲ್ಲಿ ಅವರ ನಿವೃತ್ತಿ ನಮ್ಮನ್ನು ಕಾಡಲಿದೆ ಎಂದು ಎಂ.ಎಸ್.ಎಂ.ಇ. ಹುಬ್ಬಳ್ಳಿ ಮುಖ್ಯಸ್ಥ ಬಿ.ಎಸ್.ಜವಳಗಿ ಅವರು ಸೇವಾ ಒಡನಾಟವನ್ನು ಮೆಲಕು ಹಾಕುತ್ತಾ ಚಂದ್ರಕಾಂತ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಂ.ಎಸ್.ಎಂ.ಇ.ಯ ವಿವಿಧ ವಿಭಾಗದಿಂದ ಬಂದ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.