ಚಂದಿರನಲ್ಲಿ ಶಿವಶಕ್ತಿ

ವಿಜ್ಞಾನಿಗಳಿಗೆ ಪ್ರಧಾನಿ ಸೆಲ್ಯೂಟ್

ಬೆಂಗಳೂರಿನ ಇಸ್ರೊ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಇಸ್ರೊ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿಯವರಿಗೆ ಚಂದ್ರಯಾನ-೩ ರ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರು,ಆ.೨೬- ಭಾರತದ ಚಂದ್ರಯಾನ -೩ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವವನ್ನು ಚುಂಬಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಮಕರಣ ಮಾಡಿದ್ದು ಚಂದ್ರಯಾನ ಯಶಸ್ವಿಯ ದಿನವನ್ನಾಗಿ ಆ. ೨೩ನ್ನು ಇನ್ನು ಮುಂದೆ ದೇಶದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುವುದು ಎಂದು ಹೇಳಿದ್ದಾರೆ.ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊನ ಕಮಾಂಡಿಂಗ್ ಸೆಂಟರ್‌ಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಚಂದ್ರಯಾನ-೩ರ ಯಶಸ್ಸಿಗೆ ವಿಜ್ಞಾನಿಗಳನ್ನು ಮನತುಂಬಿ ಅಭಿನಂದಿಸಿದ ನಂತರ ಮಾತನಾಡಿದ ಪ್ರಧಾನಿ ನರಂದ್ರಮೋದಿ ಅವರು ಚಂದ್ರಯಾನ-೩ರ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಿರುವುದಾಗಿ ಹೇಳಿದರು.ಶಿವನಲ್ಲಿ ಮಾನವ ಕಲ್ಯಾಣದ ಸಂಕಲ್ಪ ಇದೆ. ಶಕ್ತಿಯಲ್ಲಿ ಆ ಸಂಕಲ್ಪವನ್ನು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಕಾಣಬಹುದು, ಹಾಗಾಗಿ, ಚಂದ್ರ ಚುಂಬನದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಹಸರಿಸಲಾಗಿದೆ ಎಂದರು.
ಈ ಶಿವಶಕ್ತಿ ಪಾಯಿಂಟ್ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಪ್ರೇರಣದಾಯಕ ಸ್ಥಳವಾಗಿದೆ. ಬಾಹ್ಯಾಕಾಶ ವಿಜ್ಞಾನ ಕುರಿತ ಅಧ್ಯಯನ ಮತ್ತು ಸಂಶೋದನೆಗೆ ಪ್ರೇರಣೆಯನ್ನು ನೀಡಲಿದೆ ಎಂದರು.
ತಿರಂಗ ಪಾಯಿಂಟ್
ಚಂದ್ರಯಾನ-೨ ಪತನಗೊಂಡಿದ್ದ ಸ್ಥಳಕ್ಕೂ ನಾಮಕರಣ ಮಾಡಲು ಆಗಲೇ ನಿರ್ಧರಿಸಿದ್ದೆವು ಚಂದ್ರಯಾನ ೨ ವಿಫಲಗೊಂಡಿದ್ದು ನೋವಿನ ಸಂದರ್ಭವಾಗಿತ್ತು ಹಾಗಾಗಿ ನಾಮಕರಣ ಮಾಡಿರಲಿಲ್ಲ. ಹಾಗಾಗಿ ಎಲ್ಲ ಜನರ ಮನೆ ಮನಗಳಲ್ಲಿ ಭಾರತದ ತ್ರಿವರ್ಣ ತಿರಂಗ ಹಾರುತ್ತಿದೆ. ಈಸಂದರ್ಭದಲ್ಲಿ ಚಂದ್ರಯಾನ-೨ರ ನೌಕೆ ಪತನಗೊಂಡಿದ್ದ ಸ್ಥಳವನ್ನು ತಿರಂಗ ಪಾಯಿಂಟ್ ಎಂದು ಹೆಸರಿಸುತ್ತಿರುವುದಾಗಿಯೂ ಅವರು ಹೇಳಿದರು.ಚಂದ್ರಯಾನ-೩ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧೃವದಲ್ಲಿ ಯಶಸ್ವಿಯಾಗಿ ಇಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಸೋಮನಾಥ್ ಮತ್ತು ವಿಜ್ಞಾನಿಗಳ ತಂಡವನ್ನು ಬೆಂಗಳೂರಿನ ಇಸ್ರೊ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಅಭಿನಂಧಿಸಿ,ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.ಮಹಿಳಾ ವಿಜ್ಞಾನಿಗಳು ಚಂದ್ರಯಾನ ೩ ರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ’ಶಿವಶಕ್ತಿ’ ಪಾಯಿಂಟ್ ಮುಂಬರುವ ಪೀಳಿಗೆಗೆ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಪ್ರೇರೇಪಿಸುತ್ತದೆ. ಜನರ ಕಲ್ಯಾಣವೇ ನಮ್ಮ ಪರಮೋಚ್ಛ ಬದ್ಧತೆ ಎಂದು ತಿಳಿಸಿದ್ದಾರೆ.
ಹೊಸ ಮೈಲಿಗಲ್ಲು:
ಚಂದ್ರಯಾನ -೩ ಮಿಷನ್ ಬಾಹ್ಯಾಕಾಶ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ಈ ಸಾಧನೆ ನವ ಭಾರತದ ಉದಯ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಇಸ್ರೊದ ಐತಿಹಾಸಿಕ ಸಾಧನೆ ಮೂಲಕ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಮೂಲಕ ವಿಶ್ವದ ಅಗ್ರ ನಾಲ್ಕು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅದರಲ್ಲಿಯೂ ಚಂದ್ರನ ಅನ್ವೇಷಿಸದ ದಕ್ಷಿಣ ಧ್ರುವದ ಬಳಿ ತಲುಪಿದ ಮೊದಲ ರಾಷ್ಟ್ರವಾಗಿರುವುದು ಹೆಮ್ಮೆಯ ಸಂಗತಿ ಎಂದಿದ್ಧಾರೆ.
ಚಂದ್ರನ ಅಂಗಳದಲ್ಲಿ ಕಾಲಿಟ್ಟ ಸಮಯದಲ್ಲಿ ನಾನು ದಕ್ಷಿಣ ಆಫ್ರಿಕಾದಲ್ಲಿ ಶೃಂಗಸಭೆಯಲ್ಲಿದ್ದೆ. ನಿಮ್ಮನ್ನು ಶೀಘ್ರ ಭೇಟಿ ಮಾಡಬೇಕು ಎಂದು ಮನಸ್ಸು ಬಯಸಿತ್ತು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ.ನಿಮಗೆ, ನಿಮ್ಮ ಪ್ರಯತ್ನಗಳಿಗೆ ವಂದಿಸುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣದಲ್ಲಿ ನಾನು ಚಂಚಲನಾಗಿದ್ದೆ. ಸುರಕ್ಷಿತವಾಗಿ ಲ್ಯಾಂಡರ್ ಇಳಿಯುತ್ತಿದ್ದಂತೆ ಸಂತೋಷಕ್ಕೆ ಪಾರವೇ ಇರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿದ್ದರೂ ನನ್ನ ಮನಸ್ಸು ನಿಮ್ಮೊಂದಿಗೆ ಇತ್ತು, ನಿಮ್ಮ ಸಾಧನೆಗೆ ಕೋಟಿ ಕೋಟಿ ನಮನಗಳು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮಾ, ರಾಜ್ಯ ಪೊಲೀಸ್ ಮಹಾನಿರ್ದೆಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮತ್ತಿತರರು ಬರಮಾಡಿಕೊಡರು.

೧೬ ಶತಕೋಟಿಗೆ ಏರಿಕೆ:
ಮುಂದಿನ ಕೆಲವೇ ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಉದ್ಯಮ ೮ ಶತಕೋಟಿ ಡಾಲರ್‌ಗಳಿಂದ ೧೬ ಶತಕೋಟಿ ಡಾಲರ್ ಆಗಲಿದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಬೆಂಗಳೂರಿನ ಇಸ್ರೊ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳನ್ನು ಅಭಿನಂಧಿಸಿ ಮಾತನಾಡಿದ ಪ್ರಧಾನಿ ಯಾವುದೇ ವೈಫಲ್ಯ ಅಂತಿಮವಲ್ಲ. ವೈಫಲ್ಯ ಯಶಸ್ಸಿನ ಸೋಪಾನ ಎಂದಿದ್ದಾರೆ.
ಇದೇ ವೇಳೆ ಇಸ್ರೊ ಅಧ್ಯಕ್ಷ ಡಾ. ಸೋಮನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲ್ಯಾಂಡರ್‌ನ ಪ್ರಾತ್ಯಕ್ಷಿಕೆಯನ್ನು ಪರಿಚಯ ಮಾಡಿಕೊಟ್ಟರು. ನಂತರ ದೆಹಲಿಗೆ ಪ್ರಧಾನಿ ತೆರಳಿದರು

ಪ್ರಧಾನಿಗೆ ಸ್ವಾಗತ
ಇಸ್ರೊ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ಗೆ ತೆರಳಲು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮತ್ತು ನಗರ ಜಿಲ್ಲಾಧಿಕಾರಿ ದಯಾನಂದ್ ಸ್ವಾಗಿತಿಸಿದರು.
ವಿಮಾನ ನಿಲ್ದಾಣದ ಹೊರಗಡೆ ಬಿಜೆಪಿ ನಾಯಕರು ಪ್ರಧಾನಿ ಅವರನ್ನು ಬರಮಾಡಿಕೊಂಡರು. ನಂತರ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್ ತನಕ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ಅವರನ್ನು ಹುರಿದುಂಬಿಸಿದರು.