ಚಂದನ್ ಗೌಡಗೆ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿಗೆ ಭಾಜನ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.15:- ರೈತ ಕಲ್ಯಾಣ ಸಂಘದ ಸಂಸ್ಥಾಪಕರಾದ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಈ ಸಾಲಿನ ಜಗತ್ ಪ್ರಸಿದ್ಧ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಮಾರ್ಚ್ 17ರ ಭಾನುವಾರ ಸಂಜೆ 4.30 ಕ್ಕೆ ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ಶ್ರೀಗಳಾದ ಡಾ.ಪರಮಪೂಜ್ಯ ಶ್ರೀಮತ್ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮನುಷ್ಯ ಸತ್ತರೆ ಮಣ್ಣಿಗೆ… ಮಣ್ಣು ಸತ್ತರೆ ಎಲ್ಲಿಗೆ..? ಮಣ್ಣಿಗೆ ಮರು ಜೀವ ಎಂಬ ಅಭಿಯಾನದಲ್ಲಿ ಸತತವಾಗಿ ಎರಡು ವರ್ಷಗಳಿಂದ ಮಣ್ಣಿನ ರಕ್ಷಣೆಯ ಸಂಕಲ್ಪದೊಂದಿಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಾ, ರಾಸಾಯನಿಕ ಮುಕ್ತ ಕೃಷಿಗೆ ಪಣತೊಟ್ಟು,ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅನ್ನದಾತರಲ್ಲಿ ಅರಿವು ಮೂಡಿಸುತ್ತಿರುವ ಚಂದನ್ ಗೌಡರು, ರೈತರ ಜಮೀನುಗಳಿಗೆ ನೇರವಾಗಿ ತೆರಳಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಗಳಿಸಿ ಶ್ರೀಮಂತರ ಸಾಲಿನಲ್ಲಿ ರೈತರು ಕೂಡ ಮುಂಚೂಣಿ ಸ್ಥಾನಕ್ಕೆ ಬರಬೇಕು ಎನ್ನುವ ಮಹದಾಸೆಯ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
ಹೆತ್ತ ತಾಯಿಯಷ್ಟೇ ಪ್ರಾಮುಖ್ಯತೆಯನ್ನು ಹೊತ್ತ ತಾಯಿ ಭೂಮಿ ತಾಯಿಯ ಮಡಿಲಿನ ಧರೆನೇ ದರಿತ್ರಿ. ಭೂಲೋಕದ ಸ್ವರ್ಗ ಮಾತೆ ಪ್ರಕೃತಿ ಮಾತೆಯ ಜೀವಂತ ಖಜಾನೆ 84 ಲಕ್ಷ ಜೀವ ರಾಶಿಗಳ ಜೀವಧಾತೆ ಯಾಗಿರುವ ಮಣ್ಣಿಂದ ಕಾಯ ಮಣ್ಣಿಂದ ಜೀವ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಎಂಬ ಪುರಂದರ ದಾಸರ ವಾಣಿಯಂತೆ ಮಣ್ಣಿನ ಜೀವಂತವಾಗಿದ್ದರೆ ಮಾತ್ರ ರೈತರು ಜೀವಂತವಾಗಿರಲು ಸಾಧ್ಯ ಎಂಬ ಸತ್ಯವನ್ನು ಕೃಷಿ ವರ್ಗದ ಜಗತ್ತಿಗೆ ಸಾರುತ್ತಾ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ,ಮಣ್ಣಿನ ಸಂರಕ್ಷಣೆ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವ ಮೂಲಕ
ನಿರಂತರವಾಗಿ ಮಣ್ಣಿನ ಸೇವೆ ಮಾಡುತ್ತಿರುವ ಚಂದನ್ ಗೌಡರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.