ಕಲಬುರಗಿ,ಏ.21-ಚಿಂಚೋಳಿ ತಾಲ್ಲೂಕಿನ ಚಂದನಕೇರಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಡಾ.ಅವಿನಾಶ ಜಾಧವ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಆಗ್ರಹಿಸಿದ್ದಾರೆ.
ಚಂದನಕೇರಾದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲು ಪೂರ್ವ ಸಿದ್ಧತಾ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಶಾಸಕರು ಚುನಾವಣಾ ಪ್ರಚಾರ ಮಾಡಿ ವಾಪಸ್ ಹೋಗುತ್ತಿರುವಾಗ ಅರ್ಧ ದಾರಿಗೆ ಹೋಗಿ ಮತ್ತೆ ದಲಿತರ ಓಣಿಗೆ ಮರಳಿ ಬಂದು ಕಾಲಲ್ಲಿ ಚಪ್ಪಲಿ ಹಾಕಿಕೊಂಡು ತಮಗೆ ಹಾಕಿರುವ ಹಾರವನ್ನು ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಹಾಕಿದ್ದಾರೆ. ಆಗ ಅಲ್ಲಿನ ಯುವಕರು ಹಾಗು ಮಹಿಳೆಯರು ಇಲ್ಲಿಂದ ಹೋಗುವಾಗ ಅಂಬೇಡ್ಕರ್ ನಾಮಫಲಕ ಕಾಣಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಶಾಸಕರು ದಲಿತರ ಓಣಿ ಬಿಟ್ಟು ಮುಂದೆ ಹೋದಾಗ ಈ ಘಟನೆ ನಡೆದಿದೆ. ಯಾರೋ ಅವರ ಮೇಲೆ ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧ. ಆದರೆ ದಲಿತ ಯುವಕರ ಹಾಗೂ ಕಾಲೇಜು ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದು ಖಂಡನೀಯ. ಈ ಘಟನೆಯ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಯಾವುದೇ ಸಮಾಜದ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದವರಿಗೆ ಓಣಿಗೆ ಬಿಟ್ಟುಕೊಳ್ಳಬಾರದು ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ತಿರುಚಿದ್ದಾರೆ. ಆದ್ದರಿಂದ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿರುವ ಶಾಸಕ ಅವಿನಾಶ ಜಾಧವ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಹೊಸಮನಿ ಆಗ್ರಹಿಸಿದ್ದಾರೆ.