ಚಂಡ ಮಾರುತ ಮೀನುಗಾರರಿಗೆ ಎಚ್ಚರಿಕೆ

ನವದೆಹಲಿ, ಜೂ.೯- ಬಿಪರ್ಜೋಯ್ ಚಂಡಮಾರುತವು ಉತ್ತರಾಭಿಮುಖವಾಗಿ ಚಲಿಸಿ ಗುಜರಾತ್‌ನ ಪೋರಬಂದರ್ ಜಿಲ್ಲೆಯ ದಕ್ಷಿಣ-ನೈಋತ್ಯಕ್ಕೆ ೯೦೦ ಕಿಮೀ ಕೇಂದ್ರೀಕೃತವಾಗಿರುವ ಕಾರಣ, ಆಳ ಸಮುದ್ರ ಪ್ರದೇಶಗಳು ಮತ್ತು ಬಂದರುಗಳಿಂದ ದೂರವಿರುವಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಹಮದಾಬಾದ್‌ನ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಾಂತಿ, ಈ ವರ್ಷ ಅರಬ್ಬಿ ಸಮುದ್ರದಲ್ಲಿ ಮೊದಲ ಚಂಡಮಾರುತವು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ, ಗುಡುಗು ಮತ್ತು ಮಿಂಚುಗಳನ್ನು ತರುವ ಸಾಧ್ಯತೆಯಿದೆ ಎಂದರು.

ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಅತ್ಯಂತ ತೀವ್ರವಾದ ಚಂಡಮಾರುತ “ಬಿಪರ್ಜೋಯ್” ಪ್ರಸ್ತುತ ಪೋರುಬಂದರ್‌ನಿಂದ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ.

ಚಂಡಮಾರುತದಿಂದಾಗಿ, ಜೂನ್ ೧೦, ೧೧ ಮತ್ತು ೧೨ ರಂದು ಗಾಳಿಯ ವೇಗವು ಗಂಟೆಗೆ ೪೫ ರಿಂದ ೫೫ಕಿ.ಮೀ ನಷ್ಟು ಏರಬಹುದು. ಈ ಚಂಡಮಾರುತ ದಕ್ಷಿಣ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಗಾಳಿಯನ್ನು ತರುತ್ತದೆ. ಗುಜರಾತ್ ಮತ್ತು ಸೌರಾಷ್ಟ್ರದ ಎಲ್ಲಾ ಬಂದರುಗಳಲ್ಲಿ ಎಚ್ಚರವಹಿಸಿ ಎಂದು ಹೇಳಿದ್ದಾರೆ.