ಚಂಡಮಾರುತ ಸ್ಥಿತಿಗತಿ ರಾಜ್ಯದ ಮಾಹಿತಿ ಪಡೆದ ನಡ್ಡಾ

ಬೆಂಗಳೂರು,ಮೇ ೧೬- ರಾಜ್ಯದಲ್ಲಿ ತೌಕ್ತೆ ಚಂಡಮಾರುತದಿಂದ ಕರಾವಳಿ ಜಿಲ್ಲೆಯಲ್ಲಿನ ಪರಿಸ್ಥಿತಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಈ ಸಂಬಂಧ ಜೆ.ಪಿ ನಡ್ಡಾ ಅವರು ವಿವಿಧ ರಾಜ್ಯಗಳೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ರಾಜ್ಯದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಚಂಡಮಾರುತದಿಂದ ರಾಜ್ಯದ ಕರಾವಳಿ ಜಿಲ್ಲೆಯಲ್ಲಿನ ಸ್ಥಿತಿಗತಿಯ ಬಗ್ಗೆ ವಿವರ ನೀಡಿದರು.
ತೌಕ್ತೆ ಚಂಡಮಾರುತದಿಂದ ರಾಜ್ಯದ ಉತ್ತರ ಕನ್ನಡ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಆಗಿರುವ ಹಾನಿ, ಚಂಡಮಾರುತವನ್ನು ಎದುರಿಸಲು ರಾಜ್ಯಸರ್ಕಾರದ ಸಿದ್ಧತೆ ಎಲ್ಲದರ ಬಗ್ಗೆಯೂ ಬೊಮ್ಮಾಯಿ ಮಾಹಿತಿ ಒದಗಿಸಿದರು. ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಗಳಿಗೆ ೧ ಸಾವಿರ ಸಿಬ್ಬಂದಿಯನ್ನು ನಿಯೋಜಿಸಿರುವುದನ್ನು ಅವರು ಜೆ.ಪಿ ನಡ್ಡಾ ಅವರ ಗಮನಕ್ಕೆ ತಂದರು.