ಹೊಸದಿಲ್ಲಿ,ಜೂ.೧೯-ಬಿಪರ್‌ಜಾಯ್ ಚಂಡಮಾರುತದ ಸಮಯದಲ್ಲಿ ಗುಜರಾತ್‌ನಲ್ಲಿ ೭೦೭ ಗರ್ಭಿಣಿ ಸ್ತ್ರೀಯರು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ೧,೨೦೬ ಗರ್ಭಿಣಿಯರನ್ನು ಚಂಡಮಾರುತ ಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು ಈ ಪೈಕಿ ೭೦೭ ಮಹಿಳೆಯರ ಹೆರಿಗೆ ಮಾಡಿಸಲಾಗಿದೆ ಎಂದು ತಿಳಿಸಿದೆ.
೧೦೮ ಸಂಖ್ಯೆಯ ೨೦೨ ಆಂಬ್ಯುಲೆನ್ಸ್‌ಗಳು ಸದಾ ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ೩೦೨ ಸರ್ಕಾರಿ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.
ಇದರೊಂದಿಗೆ ರಾಜ್ಯದ ೪೫೮ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಎಲ್ಲಾ ಆಘಾತ ಸೌಲಭ್ಯಗಳಿಗಾಗಿ ಸಿದ್ಧತೆ ಮಾಡಲಾಗಿತ್ತು ಎಂದು ಸರ್ಕಾರ ಮಾಹಿತಿ ನೀಡಿದೆ.
೧,೮೫,೮೮೪ ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ, ಆಶ್ರಯ ಮನೆಯಲ್ಲಿ ವಾಸಿಸುವ ಜನರಿಗೆ ಯಾವುದೇ ಅನಾನುಕೂಲತೆಯಾಗದಂತೆ ಉತ್ತಮ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ ಮತ್ತು ಈ ವಿಪತ್ತಿನ ಸಂದರ್ಭದಲ್ಲಿ ಅವರು ಮತ್ತು ಅವರ ಕುಟುಂಬಗಳಿಗೆ ಯಾವುದೇ ತೊಂದರೆ ಒಳಗಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.