ಚಂಡಮಾರುತ ಗುಜರಾತ್, ಮಹಾ ಕರ್ನಾಟಕದಲ್ಲಿ ಕಟ್ಟೆಚ್ಚರ

ನವದೆಹಲಿ,ಜೂ.೧೨: ಸಾಕಷ್ಟು ಭೀತಿ ಸೃಷ್ಟಿಸಿರುವ ಬಿಪೊರ್‌ಜಾಯ್ ಚಂಡಮಾರುತ ಇಂದು ಮತ್ತಷ್ಟು ತೀಕ್ಷ್ಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಮತ್ತು ಗುಜರಾತ್ ಕರಾವಳಿಗಳಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಚಂಡಮಾರುತದ ಅಬ್ಬರಕ್ಕೆ ಕಡಲಿನಲ್ಲಿ ಅಲೆಗಳು ರಭಸವಾಗಿ ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಗುಜರಾತ್ ಕರಾವಳಿಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಅರಬ್ಬಿ ಸಮುದ್ರದಲ್ಲಿ ಬಿಪೊರ್‌ಜಾಯ್ ಚಂಡಮಾರುತ ಪಾಕಿಸ್ತಾನ ಕರಾವಳಿಯತ್ತ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸುಳಿವು ನೀಡಿತ್ತು. ಆದರೆ. ಇದೀಗ ಉತ್ತರ ಕರಾವಳಿಯ ಪೂರ್ವಕ್ಕೆ ಚಲಿಸುತ್ತಿದೆ. ಇದರ ಪರಿಣಾಮ ಒಂದೆರೆಡು ದಿನಗಳಲ್ಲಿ ಭೂಕುಸಿತ ಉಂಟಾಗುವ ಭೀತಿ ಎದುರಾಗಿದೆ.
ಎರಡರಿಂದ ಮೂರು ಮೀಟರ್ ಚಂಡಮಾರುತ ಏರಿಳಿತವಾಗುತ್ತಿದ್ದು, ಗುಜರಾತ್ ರಾಜ್ಯದ ಪಶ್ಚಿಮ ಕರಾವಳಿ ಜಿಲ್ಲೆಗಳಲ್ಲಿ ಹುಲ್ಲಿನ ಮನೆಗಳು, ರಸ್ತೆಗಳಿಗೆ ಹಾನಿ, ಬೆಳೆಗಳು ಮತ್ತು ತೋಟಗಳಿಗೆ, ವಿದ್ಯುತ್ ಮಾರ್ಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಭಾರತ ಮೂಲದ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರದ ಹೇಳಿಕೆ ತಿಳಿಸಿದೆ.
ಚಂಡಮಾರುತದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಗುಜರಾತ್ ಸರ್ಕಾರ ಸಕಲ ರೀತಿಯ ಸಜ್ಜುಗೊಳಿಸಿದೆ. ಎನ್‌ಡಿಆರ್‌ಎಫ್‌ನ ೧೨ ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ೧೨ ತಂಡಗಳು ಕರಾವಳಿ ಭಾಗದಲ್ಲಿ ನಿಯೋಜಿಸಲಾಗಿದೆ.
ಇದರ ಜತೆಗೆ ನೌಕಾಪಡೆ, ಭಾರತೀಯ ಕರಾವಳಿ ಕಾವಲು ಪಡೆ, ಭಾರತೀಯ ವಾಯುಪಡೆ ಸೇನೆ ಸನ್ನದ್ಧಗೊಳಿಸಲಾಗಿದೆ. ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಮುದ್ರದ ಮರಳಿನಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಅಲೆಗಳು ಬಂದು ಅಪ್ಪಳಿಸಿವೆ. ಇದರಿಂದಾಗಿ ಪ್ರವಾಸಿಗರು ಕಕ್ಕಾಬಿಕ್ಕಿಯಾದ ಘಟನೆಯೂ ನಡೆಯಿತು. ಕೆಲವರು ಕೊಚ್ಚಿ ಹೋಗಿರುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ತೆರಳದಂತೆ ಕಟ್ಟೆಚ್ಚರ ಸೂಚನೆ ನೀಡಲಾಗಿದೆ.
ಈ ಮಧ್ಯೆ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿವೆ. ಇದರಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ.
ಪ್ರತಿಕೂಲ ಹವಾಮಾನದಿಂದಾಗಿ ಮುಂಬೈ ವಿಮಾನ ನಿಲ್ದಾಣದ ರನ್ ವೇ ಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಕೆಲವು ವಿಮಾನಗಳು ರದ್ದಾಗಿವೆ. ಇಲ್ಲವೇ, ಹಾರಾಟ ವಿಳಂಬವಾಗುತ್ತಿವೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿರುವ ಬಗ್ಗೆ ಏರ್ ಇಂಡಿಯಾ ಟ್ವೀಟ್‌ನಲ್ಲಿ ವಿಷಾದ ವ್ಯಕ್ತಪಡಿಸಿದೆ.
ಮುಂಬೈ ಮತ್ತು ಫಾಲ್ಗಾರ್‌ಗಳಲ್ಲಿ ಬಿಪೊರ್‌ಜೋಯ್ ಚಂಡಮಾರುತ ಭಾರಿ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕರಾವಳಿ ಭಾಗದಲ್ಲೂ ಪರಿಸ್ಥಿತಿ ನಿಭಾಯಿಸಲು ಕ್ರಮಕೈಗೊಳ್ಳಲಾಗಿದೆ.

ಕರಾವಳಿಗೂ ತಟ್ಟಿದ ಚಂಡಮಾರುತ
ಬಿಪೊರ್‌ಜೋಯ್ ಚಂಡಮಾರುತದ ಬಿಸಿ ರಾಜ್ಯದ ಕರಾವಳಿ ಭಾಗಕ್ಕೂ ತಟ್ಟಿದೆ. ಉಡುಪಿ, ದ.ಕನ್ನಡ, ಕಾರವಾರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಾರವಾರದ ಕಡಲ ತೀರದಲ್ಲಿ ಕಡಲ್ಕೊರೆತ ಉಂಟಾಗಿದೆ. ಪ್ರಬಲವಾಗಿ ಗಾಳಿ ಬೀಸುತ್ತಿದ್ದು, ೩ ರಿಂದ ೪ ಮೀ. ಎತ್ತರದಷ್ಟು ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುತ್ತಿವೆ. ಅಲೆಗಳ ಹೊಡೆತಕ್ಕೆ ತೀರ ಪ್ರದೇಶದಲ್ಲಿ ಮರಳು ಕೊಚ್ಚಿ ಹೋಗುತ್ತಿದೆ.
ಚಂಡಮಾರುತದಿಂದಾಗಿ ಅರಬ್ಬಿಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತ ತೀವ್ರಗೊಂಡಿದ್ದರೂ ರಾಜ್ಯದಲ್ಲಿ ಇದರ ಪ್ರಭಾವ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆದರೂ ಮುನ್ನೆಚ್ಚೆರಿಕೆ ಕ್ರಮವನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.