ಚಂಡಮಾರುತದ ಭೀತಿ ತ. ನಾಡು, ಕರ್ನಾಟಕದಲ್ಲಿ ಕಟ್ಟೆಚ್ಚರ

ಚೆನ್ನೈ,ನ.೨೬- ತಮಿಳುನಾಡಿನ ಕರಾವಳಿ ತೀರಕ್ಕೆ ಇಂದು ಸಂಜೆ ಚಂಡಮಾರುತ ಅಪ್ಪಳಿಸುವುದು. ಕರ್ನಾಟಕದ ಮೇಲು ಪರಿಣಾಮ ಬೀರಲಿದೆ.
ಕಳೆದ ಮೂರು ದಿನಗಳಿಂದ ವಿರಾಮ ಕೊಟ್ಟಿದ್ದ ಮಳೆರಾಯ ಇಂದಿನಿಂದ ಮತ್ತೆ ಆರ್ಭಟಿಸಲಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಕರ್ನಾಟಕ ಸರ್ಕಾರ ಸೂಚನೆ ನೀಡಿದೆ. ಮತ್ತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಪರಿಣಾಮ ಮೊದಲು ತಮಿಳುನಾಡಿನ ರಾಜಧಾನಿ ಚೆನ್ನೈ ಎದುರಿಸಲಿದೆ. ನಂತರ ಕರ್ನಾಟಕದ ಮೈಸೂರು ಭಾಗ ಸಹ ಚಂಡಮಾರುತ ಪ್ರಭಾವಕ್ಕೆ ಒಳಪಡಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಹಮಾಮಾನ ಇಲಾಖೆ ಹೇಳಿದೆ.
ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ ಸಹ ರಾಜ್ಯದಲ್ಲಿ ಆರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.
ಚಂಡಮಾರುತ ಭೀತಿಯಿಂದ ತಮಿಳುನಾಡಿನ ೨೨ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಪುದುಚೆರಿ, ಮತ್ತು ಕಾರೈಕಲ್‌ನಲ್ಲು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೊನ್ನೆಯಷ್ಟೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಧಾರಾಕಾರ ಮಳೆಯಾಗಿ ಚೆನ್ನೈ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಅಪಾರ ಹಾನಿ ಸಂಭವಿಸಿತ್ತು. ಈಗ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.
ತಿರುನಲ್ವೇಲಿ, ತೂತುಕುಡಿ, ರಾಮನಾದಪುರಂ, ಪುದುಕೋಟೈ, ನಾಗಪಟ್ಟಣ್ಣಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕಟ್ಟಡ, ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ತಮಿಳುನಾಡಿನ ತೂತುಕುಡಿಯಲ್ಲಿ ಇಂದು ಬೆಳಗಿನ ಜಾವದವರೆಗೆ ೨೫.೯ ಸೆಂ.ಮೀ. ಮಳೆಯಾಗಿದೆ. ಇದರಿಂದಾಗಿ ತೂತುಕುಡಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಜಾನುವಾರುಗಳು ಸಾವನ್ನಪ್ಪಿವೆ. ಹಲವೆಡೆ ಮರಗಳು ಧರೆಗುರುಳಿದ್ದು, ಕೆರೆ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
೫೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ತಮಿಳುನಾಡಿನಲ್ಲಿ ಶೇ. ೬೮ಕ್ಕೂ ಹೆಚ್ಚು ಮಳೆಯಾಗಿದ್ದು, ಇದು ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದುವರೆಗೂ ೨,೩೦೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಮಳೆಯಿಂದಾಗಿ ಬೆಳೆಗಳು ಹಾನಿಯಾಗಿರುವ ಬಗ್ಗೆ ಕೇಂದ್ರದ ತಂಡ ನಷ್ಟದ ಅಂದಾಜನ್ನು ಪರಿಶೀಲಿಸಿದ್ದು, ೨,೬೦೦ ಕೋಟಿ ಪರಿಹಾರ ನೀಡುವಂತೆ ರಾಜ್ಯಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.