ಚಂಗಡಿ ಗ್ರಾಮಕ್ಕೆ ಡಿಸಿ ಶಿಲ್ಪನಾಗ್ ಭೇಟಿ

ಸಂಜೆವಾಣಿ ವಾರ್ತೆ
ಹನೂರು: ಆ.24:- ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಭೇಟಿ ನೀಡಿ ಅಲ್ಲಿನ ಜನರ ವಾಸ್ತವದ ಪರಿಸ್ಥಿತಿ ಹಾಗೂ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ಪಡೆದರು.
ಕಾಡಂಚಿನ ಗ್ರಾಮದವಾದ ಚಂಗಡಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ವೇಳೆ ಇಲ್ಲಿನ ಜನರು ಹಲವಾರು ಸಮಸ್ಯೆಗಳನ್ನು ತಿಳಿಸಿ ಇಲ್ಲಿ ವಾಸಿಸಲು ನಮಗೆ ಕಾಡುಪ್ರಾಣಿಗಳ ಭಯ ಹೆಚ್ಚಾಗಿದೆ ಹಾಗಾಗಿ ಆದಷ್ಟು ಬೇಗ ನಮ್ಮ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ನಾವು ಹೊಲದಲ್ಲಿ ಬೆಳೆದ ಪಸಲು ಕೈ ಸೇರುವುದಿಲ್ಲ ಕಾಡುಪ್ರಾಣಿಗಳ ದಂಡು ಹಾಗೂ ಕಾಡಾನೆಗಳು ಮನೆಯ ಮುಂದೆಯೆ ಬರುತ್ತವೆ ಹಲವಾರು ವರ್ಷಗಳ ಹಿಂದಿನ ಬೇಡಿಕೆಯನ್ನು ಈಡೇರಿಸಿ ಗ್ರಾಮದಿಂದ ನಮ್ಮನ್ನು ಬಿಡುಗಡೆಗೊಳಿಸಿ ಈ ಹಿಂದೆ ಜನಪ್ರತಿನಿಧಿಗಳಿಗೂ ಅಧಿಕಾರಿಗಳಿಗೂ ಗ್ರಾಮವನ್ನು ಬೆರಡೆ ಸ್ಥಳಾಂತರಿಸುವುದಕ್ಕೆ ಮನವಿ ಮಾಡಿದರು ಸಹ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.
ಗ್ರಾಮದಲ್ಲಿ ನಿರಂತರವಾಗಿ ಪ್ರಾಣಿ ಮನುಷ್ಯ ದಿನನಿತ್ಯ ಸಂಘರ್ಷ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ನಿರಂತರವಾಗಿ ಕಾಡಾನೆಗಳ ಸಮಸ್ಯೆಯಿಂದ ಬೇಸತ್ತಿದ್ದೇವೆ ಈ ಹಿಂದೆ ಹಲವಾರು ಜನ ಗ್ರಾಮದ ನಾಗರಿಕರು ಕಾಡಾನೆ ದಾಳಿಯಿಂದ ಗಾಯಗೊಂಡವರು ಇದ್ದಾರೆ ಮೃತಪಟ್ಟವರು ಸಹ ಗ್ರಾಮದವರಾಗಿದ್ದಾರೆ. ಇದುವರೆಗೂ ನಮ್ಮ ಗ್ರಾಮಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ಅಧಿಕಾರಿಗಳು ನಮಗೆ ನೀಡಿದ ಭರವಸೆಗಳು ಈಡೇರಿಲ್ಲ ಆದುದರಿಂದ ಕೂಡಲೇ ಚಂಗಡಿ ಗ್ರಾಮವನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಸ್ಥಳಾಂತರ ಮಾಡಬೇಕಾಗಿದೆ ಎಂದು ಗ್ರಾಮದ ರೈತ ಮುಖಂಡ ಚಂಗಡಿ ಕರಿಯಪ್ಪ ತಿಳಿಸಿದ್ದಾರೆ.
ಚಂಗಡಿ ಗ್ರಾಮದ ಜನರು ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ವಾಸ್ತವತೆಯ ಈ ಬಗ್ಗೆ ತಿಳಿದು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಚಂಗಡಿ ಗ್ರಾಮದ ಜನರ ಬೇಡಿಕೆ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಈ ಬಗ್ಗೆ ಸರ್ಕಾರಕ್ಕೆ ತಿಳಿಸಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆಶ್ರಮ ಶಾಲೆಗೆ ಭೇಟಿ:
ತಾಲೂಕಿನ ಕೊಣನಕೆರೆ ಗ್ರಾಮದಲ್ಲಿರುವ ಬುಡಕಟ್ಟು ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತನಾಡಿ ಶಾಲೆಯಲ್ಲಿ ಪಾಠ ಪ್ರವಚನ ಮತ್ತು ಇಲ್ಲಿನ ಆಶ್ರಮ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳು ಸಹ ಪರಿಶೀಲನೆ ನಡೆಸಿ ಶಿಕ್ಷಕರಿಂದ ಮಾಹಿತಿ ಪಡೆದು ಆಶ್ರಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಬೇಕಾದಂತಹ ಸೌಲಭ್ಯಗಳು ತಲುಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ಡಿಸಿಎಫ್ ಸಂತೋಷ್ ಕುಮಾರ್, ಇನ್ನಿತರ ಅಧಿಕಾರಿ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.