ಘಾತುಕ ಶಕ್ತಿಗಳನ್ನು ಮಟ್ಟ ಹಾಕುವುದು ಒಳ್ಳೆಯದು

ಮೈಸೂರು ಸೆ.22:- ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವುದು ದೇಶದ ಸಮಗ್ರತೆಯ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಎನ್ ಐಎ ಅಧಿಕಾರಿಗಳು ದೇಶಾದ್ಯಂತ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಯ ಮುಖ್ಯಸ್ಥರ ಮನೆಗಳ ಮೇಲೆ ನಡೆಸಿದ ದಾಳಿ ಕುರಿತು ಪ್ರತಿಕ್ರಿಯಿಸಿ ಇದೇ ಪಿಎಫ್ ಐ ಕೇರಳದಲ್ಲಿ ಓರ್ವ ಕಾಲೇಜಿನ ಪೆÇ್ರಫೆಸರ್ ಕೈಕತ್ತರಿಸಿದ್ದನ್ನು ನೋಡಿದ್ದೇವೆ. ಕೇರಳದಲ್ಲಿ ಪಿಎಫ್ ಐ ಹತ್ಯೆಗಳ ಸರಣಿಯನ್ನೇ ಆರಂಭ ಮಾಡಿತು. ಅದನ್ನು ಕರ್ನಾಟಕದ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬಂದಿತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಎಫ್ ಡಿ, ಪಿಎಫ್ ಐ ವಿರುದ್ಧ ಇದ್ದಂತಹ 175ಪ್ರಕರಣಗಳನ್ನು ಕ್ಯಾಬಿನೆಟ್ ಮುಂದಿಟ್ಟು ವಾಪಸ್ ತೆಗೆದುಕೊಳ್ಳುವ ಮೂಲಕ ಕರ್ನಾಟಕದಲ್ಲೂ ಕೂಡ ಅವರಿಗೆ ಒಂದು ರೀತಿ ಆತ್ಮ ಸ್ಥೈರ್ಯ ಕೊಟ್ಟರು. ಅದರ ಬೆನ್ನಲ್ಲೇ ರಾಜು ಕೊಲೆಯಾಯಿತು, ರವಿ ಪೂಜಾರಿಯವರ ಕೊಲೆಯಾಯಿತು.
ದೀಪಕ್, ಸಂತೋಷ್, ರುದ್ರೇಶ್ ಹೀಗೆ ಸರಣಿ ಹತ್ಯೆಗಳು ಕರ್ನಾಟಕದಲ್ಲಿ ನಡೆದಿದ್ದು, ಒಂದೊಂದು ಹತ್ಯೆಯ ಹಿಂದೆಯೂ ಕೆಎಫ್ ಡಿ, ಪಿಎಫ್ ಐ ಇತ್ತು. ಆ ನಂತರ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ಸಂಭವಿಸಿತು. ಮತ್ತೆ ಇವರದ್ದೇ ಹೆಸರು ಕೇಳಿ ಬರುತ್ತಿತ್ತು. ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕರಾಗಿರುವ ತನ್ವೀರ್ ಸೇಠ್ ಅವರ ಮೇಲೆ ಮಾರಣಾಂತಿಕ ದಾಳಿ ನಡೆಯಿತು. ಅದರ ಹಿಂದೆ ಇದ್ದಿದ್ದು ಕೂಡ ಪಿಎಫ್ ಐ ಆಗಿತ್ತು. ಸರಣಿ ಹತ್ಯೆಗಳಲ್ಲಿ ಪಿಎಫ್ ಐ ಮತ್ತು ಕೆಎಫ್ ಡಿಯ ಪಾತ್ರ ಖಚಿತವಾಗುತ್ತ ಬಂತು ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿತು. ಹಾಗಾಗಿ ಎನ್ ಐಎ ಗೆ ಇದನ್ನು ಹ್ಯಾಂಡ್ ಓವರ್ ಮಾಡಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಕೂಡ ಎನ್ ಐಎ ಗೆ ಹಸ್ತಾಂತರ ಮಾಡಿದ್ದರು. ಹರ್ಷ ಕೊಲೆ ಪ್ರಕರಣ ಶಿವಮೊಗ್ಗ ಇರಬಹುದು ಎಲ್ಲ ಪ್ರಕರಣಗಳನ್ನು ಎನ್ ಐಎಗೆ ಕೊಟ್ಟಾದ ನಂತರ ಎನ್ ಐಎ ಅಂತರರಾಜ್ಯ ಲಿಂಕ್ ಇದ್ದರೆ ಅದರ ಬೆನ್ನತ್ತಿ ಹೋಗತ್ತೆ. ಎನ್ ಐಎ ಅದರ ಟ್ರ್ಯಾಕ್ ನೆಲ್ಲ ಹುಡುಕಿ ದ ಪರಿಣಾಮವಾಗಿ ಇಂದು ದೇಶದಲ್ಲಿ ಸುಮಾರು ನೂರು ಕಡೆ ಪಿಎಫ್ ಐ, ಕೆಎಫ್ ಡಿ, ಎಸ್ ಡಿಪಿಐ ಕಛೇರಿಗಳ ಮೇಲೆ ದಾಳಿಯನ್ನು ಮಾಡಿ ಸಾಕ್ಷಿಯನ್ನು ಕಲೆ ಹಾಕುವಂಥದ್ದು, ಮತ್ತು ಕೆಲವರನ್ನು ಬಂಧನ ಮಾಡಿರುವುದು ಸ್ವಾಗತಾರ್ಹ ಎಂದರು.
ಕೆಎಫ್ ಡಿ, ಪಿಎಫ್ ಐ ಮತ್ತು ಎಸ್ ಡಿಪಿಐ ನಂತಹವರು ಸಮಾಜ ಘಾತುಕ ಶಕ್ತಿಗಳ ಒಂದು ಸಂಘಟನೆ ಮತ್ತು ಪಕ್ಷಗಳಾಗಿವೆ. ಅವುಗಳನ್ನು ಈಗಲೇ ಮಟ್ಟ ಹಾಕುವುದು ದೇಶದ ಸಮಗ್ರತೆಯ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ತಿಳಿಸಿದರು. ದಾಳಿ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ನಡೆಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿ ಜಗತ್ತಿನ ಯಾವ ದೊಡ್ಡ ದೇಶವನ್ನೇ ನೋಡಿ, ಯಾವುದೇ ದೇಶದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳನ್ನು ನೋಡಿದರೂ ಕೂಡ ಅದರ ಹಿಂದೆ ಯಾರಿದ್ದಾರೆಂಬುದು ಗೊತ್ತಿದೆ. ಇನ್ವಾಲ್ ಆಗಿರೋರು ಅವರಾದ ಮೇಲೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಧರ್ಮದ ಪ್ರಶ್ನೆ ಬರಲ್ಲ. ಸಮಾಜಘಾತುಕ ಶಕ್ತಿಗಳು ಯಾರೇ ಆಗಿದ್ದರೂ ಶಾಂತಿಯನ್ನು ಕದಡಿಸುವ ಕೆಲಸವನ್ನು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಪ್ರತಿಭಟನೆಗೆಲ್ಲ, ಜಗ್ಗುವ, ಬಗ್ಗುವ ಪ್ರಶ್ನೆಯೇ ಬರಲ್ಲ ಎಂದು ತಿಳಿಸಿದರು.
ದಸರಾ ವಿಶೇಷದ ಕುರಿತು ಪ್ರತಿಕ್ರಿಯಿಸಿ ಈ ಬಾರಿಯ ದಸರಾ ವಿಶೇಷತೆಯೆಂದರೆ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅವರು ಉದ್ಘಾಟನೆಗೆ ಬರುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಖುದ್ದಾಗಿ ಅವರನ್ನು ಮನವಿ ಮಾಡಿಕೊಂಡಿದ್ದರು. ಅದಕ್ಕೆ ರಾಷ್ಟ್ರಪತಿಗಳು ಒಪ್ಪಿಕೊಂಡಿದ್ದರು. ಅವರಿಗೆ ಇಂದು ಆಹ್ವಾನ ನೀಡಲು ನಾನು ಸೇರಿದಂತೆ ಸಚಿವ ಎಸ್.ಟಿ.ಸೋಮಶೇಖರ್ , ಮೇಯರ್ ಶಶಿಕುಮಾರ್ , ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದರಾಗಿರುವ ಅಣ್ಣಾ ಸಾಹೇಬ್ ಜೊಲ್ಲೆಯವರು ಬಂದಿದ್ದಾರೆ. ನಾವಿಷ್ಟು ಮಂದಿ ಅಧಕೃತವಾಗಿ ಆಹ್ವಾನ ನೀಡುತ್ತಿದ್ದೇವೆ. ರಾಷ್ಟ್ರಪತಿಗಳು ಬರುವುದಾಗಿ ಖಚಿತಪಡಿಸಿದ್ದಾರೆ. ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬಂದಿದ್ದಿಲ್ಲ, ಇದೇ ಮೊದಲ ಬಾರಿಗೆ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿರುವಂತಹ ದ್ರೌಪದಿ ಮುರ್ಮು ಬರುತ್ತಿರುವುದು ಬಹಳ ವಿಶೇಷ. ಮೈಸೂರಿಗೆ ದೊಡ್ಡ ಗೌರವ ಎಂದು ತಿಳಿಸಿದರು.