ಘರ್ ವಾಪ್ಸಿಗೆ ಕೈ ಹಾಕಿದ್ರೆ ಬಿಜೆಪಿ-ಜೆಡಿಎಸ್ ಅರ್ಧ ಖಾಲಿ

ಬೆಂಗಳೂರು,ಆ.೧೯:ಕಾಂಗ್ರೆಸ್ ಪಕ್ಷ ಬಿಜೆಪಿ-ಜೆಡಿಎಸ್‌ನ್ನು ಒಡೆಯಲು ಹೊರಟಿಲ್ಲ,ಕಾಂಗ್ರೆಸ್ ಘರ್ ವಾಪ್ಸಿ ಮಾಡಲು ಹೊರಟರೆ ಅರ್ಧ ಬಿಜೆಪಿ ಮತ್ತು ಅರ್ಧ ಜೆಡಿಎಸ್ ಖಾಲಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಖರ್ಗೆ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾವುದೇ ಷರತ್ತು ಇಲ್ಲದೆ ಯಾರೇ ಬಂದರೂ ಸ್ವಾಗತ ಇದೆ. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ, ಜೆಡಿಎಸ್-ಬಿಜೆಪಿಯನ್ನು ಒಡೆಯಲು ಹೋಗುತ್ತಿಲ್ಲ. ಯಾರ ಯಾರ ಅಸ್ತಿತ್ವ ಏನು ಅನ್ನೋದನ್ನು ಜನರೇ ಚುನಾವಣೆಯಲ್ಲಿ ತೋರಿಸಿದ್ದಾರೆ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್‌ರವರು ಅವರ ಅಸ್ತಿತ್ವ ಕಾಪಾಡಿಕೊಂಡರೆ ಸಾಕು ಎಂದು ವ್ಯಂಗ್ಯವಾಡಿದರು.
ಹೈದ್ರಾಬಾದ್-ಕರ್ನಾಟಕ ಭಾಗದ ಕೆಲ ಶಾಸಕರು ನನ್ನ ಜತೆಗೆ ಸಂಪರ್ಕದಲ್ಲಿದ್ದಾರೆ. ಹಾಗೆಯೇ ಮೈಸೂರು ಭಾಗದಲ್ಲಿ ಕೆಲವರು ಸಚಿವ ಚೆಲುವರಾಯಸ್ವಾಮಿ ಅವರ ಸಂಪರ್ಕದಲ್ಲಿರಬಹುದು. ವಲಸಿಗರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಿದ್ದಾರೆ ಎಂದರು.
ಆಪರೇಷನ್ ಹಸ್ತ ತಡೆಯಲು ಬಿಜೆಪಿಯವರು ಯಡಿಯೂರಪ್ಪರವರ ನೇತೃತ್ವದಲ್ಲಿ ಸಭೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪರವರನ್ನು ಬಿಜೆಪಿಯವರು ಹೇಗೆ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯಲ್ಲಿ ಕ್ಯಾಪ್ಟನ್ ಆಗೋಕೆ ಯಾರೂ ಸಿದ್ಧರಿಲ್ಲ ಎಂದರು.
ಬಿಜೆಪಿಯಲ್ಲಿ ಯಡಿಯೂರಪ್ಪರವರ ಮಾತು ನಡೆಯುತ್ತಿದ್ದರೆ ಇಷ್ಟು ಜನ ಬಿಜೆಪಿಯವರು ಪಕ್ಷ ಬಿಟ್ಟು ಬಿಡಲು ಸಿದ್ಧರಾಗುತ್ತಿದ್ದರಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ ಎಷ್ಟು ಜನರಿಗೆ ಟಿಕೆಟ್ ಕೊಟ್ಟರು. ಯಡಿಯೂರಪ್ಪಗೆ ಕಣ್ಣೀರು ಬರಿಸಿ ಅಧಿಕಾರದಿಂದ ಕೆಳಗಿಳಿಸಿದ್ದನ್ನು ಇಡೀ ರಾಜ್ಯವೇ ನೋಡಿದೆ. ಬಿಜೆಪಿ ಈಗ ಮುಳುಗುತ್ತಿರುವ ಹಡಗು ಎಂದರು.
ವಿಧಾನ ಪರಿಷತ್‌ಗೆ ನಿವೃತ್ತ ಅಧಿಕಾರಿ ಸುಧಾಮ್‌ದಾಸ್ ಅವರ ನಾಮನಿರ್ದೇಶನಕ್ಕೆ ದಲಿತ ಸಮುದಾಯದ ನಾಲ್ವರು ಸಚಿವರು ವಿರೋಧ ವ್ಯಕ್ತಪಡಿಸಿ ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಧಾಮ್‌ದಾಸ್‌ರವರಿಗೆ ಕೊಡಲೇ ಬಾರದು ಎಂದು ಹೇಳಿಲ್ಲ. ಪರಿಶೀಲಿಸಿ ಎಂದು ಪತ್ರದಲ್ಲಿ ಹೇಳಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸುಧಾಮ್‌ದಾಸ್ ಕೆಲತಿಂಗಳ ಹಿಂದಷ್ಟೇ ಪಕ್ಷ ಸೇರ್ಪಡೆಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಜವಾಬ್ದಾರಿ ನಿಭಾಯಿಸಿ ಶ್ರಮ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.