ಘನ ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣೆಯ ಕಸದ ವಾಹನಗಳಿಗೆ ಸಿಇಓ ಗಂಗವಾರ ಚಾಲನೆ

ಬೀದರ ಡಿ. 21: ಸ್ವಚ್ಛ ಭಾರತ ಮಿಶನ್ ಯೋಜನೆ ಮತ್ತು ಜಿಲ್ಲಾ ಪಂಚಾಯತ್ ಬೀದರ ಇವರಿಂದ ಘನ ಮತ್ತು ದ್ರವ ತಾಜ್ಯ ವಸ್ತುಗಳ ನಿರ್ವಹಣೆಯ ಕಸದ ವಾಹನಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಅವರು ಡಿಸೆಂಬರ್ 20ರಂದು ನಗರದ ಸಿದ್ಧಾರ್ಥ ಕಾಲೇಜು ಬಳಿಯಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿಇಓ ಅವರು, ಸ್ವಚ್ಚತೆಗೆ ನಾವು ಹೆಚ್ಚಿನ ಮಹತ್ವ ಕೊಡಬೇಕು. ಈ ಹಿನ್ನೆಲೆಯಲ್ಲಿ ಸದರಿ ಈ ಕಸದ ವಾಹನಗಳ ಮೂಲಕ ಘನ ಮತ್ತು ದ್ರವ ತಾಜ್ಯ ವಸ್ತುಗಳ ನಿರ್ವಹಣೆಯು ನಿಯಮಿತವಾಗಿ ನಡೆಯಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸುಂದಾಳ, ಠಾಣಾಕುಶನೂರ, ಧೂಪತಮಹಾಗಾಂವ್, ವಡಗಾಂವ್ (ದೆ), ಪರತಾಪೂರ, ಮುಡಬಿ, ಹನುಮಂತವಾಡಿ, ಚಂಡಕಾಪೂರ, ಉಜಳಂಬ, ಲಂಜವಾಡ, ಅಳವಾಯಿ, ಅಂಬೆಸಾಂಗವಿ, ಅಲಿಯಂಬರ್, ಅಣದೂರ, ಚಾಂಬೋಳ, ನಾಗೂರಾ, ಮಾಣಿಕನಗರ, ಘಾಟಬೋರಾಳ, ಮನ್ನಾಖೆಳ್ಳಿ ಮತ್ತು ಬೆಮಳಖೆಡದ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸಿಇಓ ಅವರು ಒಂದೊಂದು ಕಸದ ವಾಹನಗಳನ್ನು ಹಸ್ತಾಂತರ ಮಾಡಿದರು.
ಮತದಾನ ಜಾಗೃತಿ ಮೂಡಿಸಿ: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಶೇ.100 ರಷ್ಟು ಮತದಾನವಾಗುವಂತೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೆ ವಾಹನಗಳಿಗೆ ಮೈಕ್ ಅಳವಡಿಸಿ ಮತದಾನ ಜಾಗೃತಿ ನಡೆಸಬೇಕು ಎಂದು ಇದೆ ವೇಳೆ ಸಿಇಓ ಅವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ವಚ್ಚ ಭಾರತ ಮಿಶನ್ ನೋಡೆಲ್ ಅಧಿಕಾರಿ ವಿಜಯಕುಮಾರ ಮಡ್ಡೆ, ಡಾ.ಗೌತಮ ಅರಳಿ, ಬೀದರ ತಾಪಂ ಸಹಾಯಕ ನಿರ್ದೇಶಕರಾದ ಶರತಕುಮಾರ್, ಎಸ್‍ಬಿಎಂನ ಜಿಲ್ಲಾ ಸಮಾಲೋಚಕರಾದ ಕಲ್ಲಪ್ಪ ಮಜ್ಜಗೆ ಮತ್ತು ಆಯಾ ಗ್ರಾಮ ಪಂಚಾಯಿತಿಯ ಪಿಡಿಓಗಳು ಉಪಸ್ಥಿತರಿದ್ದರು.