ಘನತ್ಯಾಜ್ಯ ನಿರ್ವಹಣೆ: ಸಾಂಕ್ರಾಮಿಕ ರೋಗದ ಭೀತಿ-ವೆಂಕಟರೆಡ್ಡಿ

ರಾಯಚೂರು.ಜೂ.೮-ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ನಿರ್ವಹಣೆ ಇಲ್ಲದ ಕಾರಣ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದು, ಇದನ್ನು ಕೂಡಲೇ ವ್ಯವಸ್ಥಿತ ಸಂರಕ್ಷಿಸುವ
ಕೆಲಸವಾಗಬೇಕಾಗಿದೆ ಎಂದು ಲೋಕಜನಶಕ್ತಿ ಪಾರ್ಟಿಯ ಕಿಸಾನ್‌ಸೆಲ್‌ನ ರಾಜ್ಯಾಧ್ಯಕ್ಷ ಜಿ.ವೆಂಕಟರೆಡ್ಡಿ ಆಗ್ರಹಿಸಿದ್ದಾರೆ.
ನಗರದ ಯಕ್ಲಾಸಪೂರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕ ಕಳೆದ ಒಂದು ವರ್ಷದ ಹಿಂದೆ ಕ್ಯಾಷ್ಯೂಟೆಕ್ ಸಂಸ್ಥೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಂಸ್ಕರಣೆ ಮಾಡಿ ನಿರ್ವಹಿಸುತ್ತಿತ್ತು. ಆದರೆ, ಕಳೆದ ಒಂದು ವರ್ಷಗಳ ಹಿಂದಿನಿಂದ ತ್ಯಾಜ್ಯ ಡಂಪ್ ಮಾಡಲಾಗುತ್ತಿದೆಯೇ ವಿನಃ ಸಂಸ್ಕರಿಸುವ ಕೆಲಸ ಸ್ಥಗಿತಗೊಂಡಿದೆ.
ನಗರದ ೩೫ ವಾರ್ಡುಗಳಿಂದ ಘನತ್ಯಾಜ್ಯವನ್ನು ತಂದು ಈ ಸ್ಥಳದಲ್ಲಿ ಸುರಿಯಲಾಗುತ್ತಿದೆ. ಒಂದು ವರ್ಷದಿಂದ ತಂದು ಸುರಿದಿರುವ ಘನತ್ಯಾಜ್ಯವು ಗೋಪುರದಂತೆ ಪರಿವರ್ತನೆಯಾಗಿದ್ದು, ಸಂಸ್ಕರಣಾ ವ್ಯವಸ್ಥೆಯಿಲ್ಲದ ಕಾರಣ ಸುತ್ತಮುತ್ತಲಿನ ಪ್ರದೇಶಗಳಿಗೆ ತ್ಯಾಜ್ಯವಸ್ತುಗಳ ಕೊಳೆತ ವಾಸನೆ ಹರಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದ್ದು, ಇದನ್ನು ಕೂಡಲೇ ವ್ಯವಸ್ಥಿತ ನಿರ್ವಹಣೆಗೆ ನಗರಸಭೆ ಮುಂದಾಗಬೇಕು. ಇಲ್ಲವಾದರೆ ಸಾರ್ವಜನಿಕರ ಆರೋಗ್ಯದ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ ಎಂದು ಜಿ.ವೆಂಕಟರೆಡ್ಡಿ ನಗರಸಭೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಲೋಕಜನಶಕ್ತಿ ಪಾರ್ಟಿಯ ಜಿಲ್ಲಾಧ್ಯಕ್ಷ ಆಶಾರೆಡ್ಡಿ, ನಗರಾಧ್ಯಕ್ಷ ಬಂಗಿ ಮುನಿರೆಡ್ಡಿ, ಸತ್ಯನಾರಾಯಣ, ಶೇಖರಗೌಡ ಸೇರಿದಂತೆ ಇನ್ನಿತರರಿದ್ದರು.