ಕಲಬುರಗಿ.ಜೂ.03: ಕಳೆದ ಆರು ತಿಂಗಳ ಹಿಂದೆ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಘತ್ತರಗಿ ಭಾಗಮ್ಮ ದೇವಸ್ಥಾನಕ್ಕೆ ರಾತ್ರಿ ಮೂರು ಜನ ಮುಸುಕುದಾರಿಗಳು ನುಗ್ಗಿ ದೇವಿಯ ಮೈಮೇಲಿನ ಚಿನ್ನಾಭರಣಗಳು ಹಾಗೂ ಹುಂಡಿಯಲ್ಲಿನ ಹಣವನ್ನು ದೋಚಿ ಪರಾರಿಯಾದ ಪ್ರಕರಣವನ್ನು ಪೋಲಿಸರು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೊಬ್ಬನ ಬಂಧನದ ಕಾರ್ಯಾಚರಣೆ ಮುಂದುವರೆದಿದೆ.
ಬಂಧಿತರನ್ನು ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹುಲಿಯಾಳ್ ಭೀಮರಾಯ್ ನಾಯ್ಕ್ ತಾಂಡಾದ ನಿವಾಸಿಗಳಾದ ತಾನಾಜಿ ತಂದೆ ಕೇಶವ್ ರಾಠೋಡ್, ಕವಿತಾ ಗಂಡ ಬಾಲಾಜಿ ರಾಠೋಡ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 80,000ರೂ.ಗಳ ಮೌಲ್ಯದ 65 ಗ್ರಾಮ್ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ 2022ರ ಡಿಸೆಂಬರ್ 29ರಂದು ರಾತ್ರಿ ಮೂವರು ಮುಸುಕುದಾರಿಗಳು ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನದೊಳಗೆ ನುಗ್ಗಿ ದೇವಿಯ ಮೈಮೇಲಿದ್ದ 6,40,000ರೂ.ಗಳ ಮೌಲ್ಯದ ಬಂಗಾರದ ಆಭರಣಗಳನ್ನು ಮತ್ತು ಕಾಣಿಕೆ ಹುಂಡಿಯಲ್ಲಿದ್ದ 1,50,000ರೂ.ಗಳ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆ ಕುರಿತು ದೇವಸ್ಥಾನದ ದ್ವಿತೀಯ ದರ್ಜೆ ಸಹಾಯಕ ಭೀಮರಾವ್ ಅವರು ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿತ್ತು.
ಆಳಂದ್ ಉಪ ವಿಭಾಗದ ಡಿವೈಎಸ್‍ಪಿ ಗೋಪಿ ಆರ್., ಅವರ ನೇತೃತ್ವದಲ್ಲಿ ಸಿಪಿಐ ರಾಜಶೇಖರ್ ಬಡದೇಸಾರ್, ಪಿಎಸ್‍ಐ ಭೀಮರಾಯ್ ಬಂಕಲಿ, ಮುಖ್ಯ ಪೇದೆ ಸಂತೋಷ್, ಪೇದೆಗಳಾದ ಆನಂದ್, ಯಲ್ಲಾಲಿಂಗ್, ಶಿವಲಿಂಗ್ ಅವರು ಕಾರ್ಯಾಚರಣೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪೋಲಿಸರ ಕಾರ್ಯಾಚರಣೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀಮತಿ ಇಶಾ ಪಂತ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿಧಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳಿಂದ ಶಾಸಕ ಎಂ.ವೈ. ಪಾಟೀಲ್ ಅವರೂ ಸೇರಿದಂತೆ ಹಲವು ರಾಜಕೀಯ ನಾಯಕರೂ ಸೇರಿದಂತೆ ಸಾರ್ವಜನಿಕರೂ ಸಹ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆದಾಗ್ಯೂ, ಈಗ ಕಳ್ಳತನ ಪ್ರಕರಣ ಬೇಧಿಸಿರುವುದು ಭಕ್ತರಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.