ಘಟ್ಟಿ ಮಳೆ ಬಂದರೆ ಗಡ್ಡೆಗೆ ಬಿದ್ದೇವು: ಮಳೆಯಾಶ್ರಿತ ರೈತರ ತುಡಿತ”

ಶಿವರಾಮ ಸಿರಿಗೇರಿ
ಸಿರಿಗೇರಿ. ಸೆ.23 ಈವರ್ಷ ಸಿರಿಗೇರಿ ಹೋಬಳಿಥಿ ರೈತರ ಜಮೀನುಗಳಲ್ಲಿ ನಾನಾ ಬೆಳೆಗಳು ನಳನಳಿಸುತ್ತಿವೆ. ಮುಂಗಾರಿನ ಮಳೆರಾಯ ಉತ್ತಮ ಆರಂಭ ನೀಡಿದ್ದರಿಂದ ನೀರಾವರಿ ರೈತರ ಜಮೀನುಗಳಂತೆ ಮಳೆಯಾಶ್ರಿತ ಜಮೀನುಗಳಲ್ಲಿಯೂ ಬೆಳೆ ಉತ್ತಮವಾಗಿ ಬಂದಿದೆ. ವರ್ಷ ಪ್ರಾರಂಭದಿಂದ ರೋಹಿಣಿ, ಮೃಗಶಿರ, ಆರಿದ್ರಾ ಕಾರ್ತಿಗಳು ಮತ್ತು ನಂತರದ ಕಾರ್ತಿಗಳ ಸಾಧಾರಣ ಮಳೆಯು ಈ ವ್ಯಾಪ್ತಿಯ 7073 ಎಕರೆ ಹೊರಭೂಮಿ ರೈತರನ್ನೂ ಕೈ ಹಿಡಿದ ಪರಿಣಾಮ ಈ ವರ್ಷ ಅತಿ ಹೆಚ್ಚಿನ ರೈತರು ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆದಿದ್ದು, ಕಾರ್ತಿಗೊಂದು ಸಾಧಾರಣ ಮಳೆ ಬಂದಿದ್ದರಿಂದ ಸುಮಾರು 1500 ಎಕರೆಯ ನೀರಾವರಿ ಜಮೀನುಗಳಿಗೂ ಕಡಿಮೆ ಇಲ್ಲವೆಂಬಂತೆ ಮೆಣಸಿನಕಾಯಿ, ಇತರೆ ಬೆಳೆ ಬೆಳೆದಿದ್ದಾರೆ. ಮುಂದಿನ ಹಸ್ತ, ಚಿತ್ತ, ಸ್ವಾತಿ ಕಾರ್ತಿಗಳಲ್ಲಿ ಇನ್ನೊಂದೆರಡು ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರಿದ್ದು ಒಂದು ‘ಘಟ್ಟಿ ಮಳೆ ಬಂದರೆ ಗಡ್ಡೆಗೆ ಬಿದ್ದೇವು’ ಎಂದು ತಮ್ಮ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಮಾದರಿಯ ಉತ್ತಮ ಬೆಳೆ: ಈವರ್ಷ ನೀರಾವರಿ (ಕಾಲುವೆ ನೀರು, ಪಂಪ್‍ಸೆಟ್) ಹೊಂದಿರುವ ಜಮೀನುಗಳಲ್ಲಿ ಪ್ರತಿವರ್ಷದಂತೆ ಈಸಲವೂ ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ, ಅಳ್ಳಿನಜೋಳ ಬೆಳೆದಿದ್ದಾರೆ. ಮಳೆಯಾಶ್ರಿ ಜಮೀನುಗಳಲ್ಲಿ ಮೆಣಸಿನಕಾಯಿ, ಹತ್ತಿ,  ತೊಗರಿ, ನೆಲಗಡಲೆ (ಶೇಂಗಾ), ಸಜ್ಜೆ, ಜೋಳ, ನವಣೆ, ಸೂರ್ಯಕಾಂತಿ, ಔಡಲ ಬೆಳೆಯಲಾಗಿದ್ದು, ಫಲವತ್ತತೆ ಹೊಂದಿರುವ ಎಲ್ಲಾ ಮಸಾರಿ (ಕೆಂಪು) ಎರೆ (ಕಪ್ಪು) ಜಮೀನುಗಳಲ್ಲಿ ಉತ್ತಮ ಫಸಲು ಬಂದು ರೈತರಲ್ಲಿ ಮಂದಹಾಸ ಮೂಡಿಸಿದೆ, ಇನ್ನೊಂದು ಮಳೆಯಿಂದ ಉತ್ತಮ ಇಳುವರಿಯನ್ನು ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇದರ ಮದ್ಯೆ ಮುಂದೆ ದರಗಳು ಹೇಗಿರಲಿವೆಯೋ ಎಂಬ ಆತಂಕವೂ ಕಾಡುತ್ತಿದೆ.
ಆಸೆ ಹುಸಿಯಾದ ಹಸೆಕಾಯಿ: ಈವರ್ಷ ಸುಮಾರು 1500 ರಿಂದ 2ಸಾವಿರ ಎಕರೆ ಪ್ರದೇಶದಲ್ಲಿ 5531 ತಳಿಯ ಹಸಿ ಮೆಣಸಿನಕಾಯಿ ಬೆಳೆಯಲಾಗಿದೆ. ಕಳೆದವರ್ಷ ಹೆಚ್ಚಿನ ರೈತರು ಹಸೆಕಾಯಿಯಲ್ಲಿ ಲಾಭ ಕಂಡಿದ್ದರು. ಈವರ್ಷ ನಾಮುಂದು ತಾಮುಂದು ಎಂದು ಹಸೆಕಾಯಿ ಬೆಳೆಸಿದ್ದಾರೆ. ಆದರೆ ಧರ ಕೆಜಿಗೆ 5ರೂ. ಬಂದಿದ್ದರಿಂದ ರ್ಯತರು ಅವಕ್ಕಾಗಿದ್ದಾರೆ. ಕೆಲವರು ಮದ್ಯವರ್ತಿಗಳ ಆಟವಿರಬಹುದೆಂದು ತಾವೆ ಸ್ವತಹ ಲೋಡ್ ಮಾಡಿಕೊಂಡು, ಹೈದರಾಬಾದ್ ಇತರೆ ನಗರಗಳಿಗೆ ಕೊಂಡೊಯ್ದು 3, 4ರೂ.ಗೆ ಕೆಜೆಯಂತೆ ಮಾರಿ ಪೆಚ್ಚುಮೋರೆಯಿಂದ ಹಿಂದಿರುಗಿದ ಉದಾಹರಣೆಗಳೂ ನಡೆದಿವೆ. ಈ ಧರಕ್ಕೆ ಹೆದರಿದ ಮುಕ್ಕಾಲುಭಾಗ ರೈತರು ಹಸಿ ಮೆಣಸಿನಕಾಯಿ ಒಣಗಾಯಿಗೆ ಬಿಟ್ಟು ಒಣಕಾಯಿಯಲ್ಲಾದರೂ ಗಿಟ್ಟುವುದೇನೋ ಎನ್ನುವ ತಂತ್ರಕ್ಕೆ ಮುಂದಾಗಿದ್ದಾರೆ. ಹಸೆಕಾಯಿ, ಈರುಳ್ಳಿ ದರಗಳು ಈವರ್ಷ ಕೈಕೊಟ್ಟಿದ್ದು, ಉಳಿದ ಬೆಳೆಗಳಿಂದ ದಡ ಸೇರಲು ಒಂದು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.