ನಿತೀಶ್ ಸಂಚಾಲಕ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು. ಜು. ೧೮- ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಒಂದುಗೂಡುತ್ತಿರುವ ದೇಶದ ಪ್ರಮುಖ ಪ್ರತಿಪಕ್ಷಗಳು ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಮಹಾಘಟ ಬಂಧನ್ ಸಾರಥ್ಯವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಬಿಹಾರದ ಮುಖ್ಯಮಂತ್ರಿ ಜೆಡಿಯು ಮುಖ್ಯಸ್ಥ ನಿತೀಶ್‌ಕುಮಾರ್ ಅವರಿಗೆ ವಹಿಸುವ ತೀರ್ಮಾನಕ್ಕೆ ಬರುವುದು ಬಹುತೇಕ ನಿಶ್ಚಿತ.ಬೆಂಗಳೂರಿನಲ್ಲಿಂದು ನಡೆದಿರುವ ಮಹಾಘಟ ಬಂಧನ್‌ನ ೨ನೇ ಸಭೆಯಲ್ಲಿ ಘಟ ಬಂಧನ್ ಹೆಸರು, ಘಟ ಬಂಧನ್‌ನ್ನು ಯಾರು ಮುನ್ನಡೆಸಬೇಕು ಎಂಬ ಬಗ್ಗೆ ದೇಶದ ೨೬ಕ್ಕೂ ಹೆಚ್ಚು ವಿವಿಧ ಪಕ್ಷಗಳ ನಾಯಕರು ಚರ್ಚಿಸಿದದು, ಘಟ ಬಂಧನ್ ಸಾರಥ್ಯವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಕೈಗಿಡುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.ಈ ಮಹಾ ಘಟ ಬಂಧನ್‌ನ ಅಧ್ಯಕ್ಷರಾಗಿ ಸೋನಿಯಾಗಾಂಧಿಯವರನ್ನು, ಸಂಚಾಲಕರನ್ನಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನು ನಿಯುಕ್ತಿಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದು, ಎಲ್ಲ ವಿರೋಧ ಪಕ್ಷಗಳು ನಾಯಕರುಗಳು ಸರ್ವಾನುಮತದ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.ಲೋಕಸಭಾ ಚುನಾವಣೆಯ ಬಿಜೆಪಿ ಹೊರತುಪಡಿಸಿ ಉಳಿದಂತೆ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ವೇದಿಕೆಯನ್ನು ಅಣಿ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ನೀಡುವ ತೀರ್ಮಾನಗಳು ಆಗಿವೆ ಎಂದು ಉನ್ನತ ಮೂಲಗಳು ಹೇಳಿವೆ.
ಇಂದಿನ ಸಭೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಒಂದು ಸೂಕ್ತ ಹೆಸರಿಡುವ ಬಗ್ಗೆಯೂ ಚರ್ಚೆಗಳಾಗಿದ್ದು, ಯುನೈಟೆಡ್ ವಿ ಸ್ಟ್ಯಾಂಡ್ ಎಂಬ ಟ್ಯಾಗ್‌ಲೈನ್‌ನ್ನು ಬಳಸಲು ತೀರ್ಮಾನಿಸಲಾಗಿದೆ.ಇಂದಿನ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಡುವಿನ ಸೀಟು ಹಂಚಿಕೆ ಮತ್ತಿತರ ವಿಚಾರಗಳ ಬಗ್ಗೆಯೂ ದಿನವಿಡೀ ಚರ್ಚೆಗಳು ನಡೆದವು.ಇಂದಿನ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ರಾಹುಲ್‌ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸುರೇನ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಆರ್‌ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಂಸಿಪಿ ಮುಖ್ಯಸ್ಥ ಶರದ್‌ಪವಾರ್, ತಮಿಳುನಾಡಿನ ನಾಯಕ ವೈಕೊ, ಕೇರಳದ ಜೋಸೆಫ್ ಕಾಂಗ್ರೆಸ್ ಬಣದ ಮುಖಂಡರು, ಸಿಪಿಎಂ ಸೀತಾರವಿಚೂರಿ, ಡಿ. ರಾಜಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಸುಮಾರು ೨೬ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸೋನಿಯಾ- ಮಮತಾ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ಪರಸ್ಪರರ ಪಕ್ಕದಲ್ಲಿ ಕುಳಿತಿದ್ದರು. ಅಲ್ಲದೆ ಒಬ್ಬರಿಗೊಬ್ಬರು ಸುಮಾರು ೨೦ ನಿಮಿಷಗಳ ಕಾಲ ನಡೆಯಿತು ಎನ್ನಲಾಗಿದೆ.
ಇಬ್ಬರು ನಾಯಕರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೂ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಸಂಬಂಧಗಳು ಇತ್ತೀಚೆಗೆ ಹದಗೆಟ್ಟಿದ್ದವು. ಆದರೆ ಮುಂದಿನ ವರ್ಷ ಬಿಜೆಪಿಯನ್ನು ಸೋಲಿಸುವುದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಬಲಪಡಿಸಲು ಇಬ್ಬರೂ ನಾಯಕರು ವೈಮನಸ್ಯ ಬದಿಗೆ ಸರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪ್ರತಿಪಕ್ಷಗಳನ್ನು ಹುರಿದುಂಬಿಸಿದ್ದು ಮಾತ್ರವಲ್ಲದೆ, ಪಕ್ಷವನ್ನು ಕಮಾಂಡಿಂಗ್ ಸ್ಥಾನದಲ್ಲಿ ನಿಲ್ಲಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ಪ್ರೊಫೈಲ್ ಅನ್ನು ಇಟ್ಟುಕೊಂಡಿದೆ. ಇತರ ನಾಯಕರ ಆಲೋಚನೆಗಳನ್ನು ಕೇಳಲು ಬಯಸುತ್ತದೆ ಎಂದು ಪುನರುಚ್ಚರಿಸಿದೆ.
ಎಲ್ಲರಿಗೂ ಸ್ವಾಗತ
ಬಿಜೆಪಿ ವಿರುದ್ದ ಹೋರಾಟ ಮಾಡುವ ಇಚ್ಚಾಶಕ್ತಿ ಇರುವ ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಒಕ್ಕೂಟಕ್ಕೆ ಸ್ವಾಗತ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಸಾಮಾಜಿಕ ನ್ಯಾಯವೇ ಗುರಿ: ಖರ್ಗೆ
ಸಾಮಾಜಿಕ ನ್ಯಾಯ, ಅಂತರ್ಗತ ಅಭಿವೃದ್ಧಿ ಮತ್ತು ರಾಷ್ಟ್ರೀಯ ಕಲ್ಯಾಣದ ಕಾರ್ಯಸೂಚಿ ಉತ್ತೇಜಿಸಲು ಸಮಾನ ಮನಸ್ಕ ವಿರೋಧ ಪಕ್ಷಗಳು ಕೆಲಸ ಮಾಡಲಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದ ಜನರನ್ನು ದ್ವೇಷ, ವಿಭಜನೆ, ಆರ್ಥಿಕ ಅಸಮಾನತೆ ಮತ್ತು ಲೂಟಿಯ ನಿರಂಕುಶ ಮತ್ತು ಜನವಿರೋಧಿ ರಾಜಕಾರಣದಿಂದ ಮುಕ್ತಗೊಳಿಸಲು ಬಯಸುತ್ತೇವೆ. ಈ ಭಾರತಕ್ಕಾಗಿ ಯುನೈಟೆಡ್ ವಿ ಸ್ಟ್ಯಾಂಡ್ ಎಂದಿದ್ದಾರೆ.