ಬೆಂಗಳೂರು,ಜೂ.೩:ಒಡಿಶಾದ ಬಾಲಸೂರ್‌ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷತೆಗೆ ಗಮನ ಹರಿಸಿ ಅವರ ಯೋಗಕ್ಷೇಮದ ಉಸ್ತುವಾರಿಗೆ ಸಚಿವ ಸಂತೋಷ್‌ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜನೆ ಮಾಡಿ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ರಕ್ಷಣೆಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.
ಈ ಘಟನೆ ಬಗ್ಗೆ ಮುಖ್ಯ ಕಾರ್ಯದರ್ಶಿಯವರಿಂದ ವರದಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಹಿರಿಯ
ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಚಿವ ಸಂತೋಷ್ ಲಾಡ್ ಅವರಿಗೆ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನಹರಿಸಿ ಅವರಿಗೆ ಅಗತ್ಯ ನೆರವು ಒದಗಿಸುವ ಜವಾಬ್ದಾರಿ ನೀಡಿದ್ದಾರೆ.ಮುಖ್ಯಮಂತ್ರಿಗಳ ಸೂಚನೆಯಂತೆ ಸಚಿವ ಸಂತೋಷ್‌ಲಾಡ್ ಅಧಿಕಾರಿಗಳ ತಂಡದ ಜತೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಸಚಿವ ಸಂತೋಷ್‌ಲಾಡ್ ಅವರ ಜತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ರಾಜನ್ ಸಹ ತೆರಳಿದ್ದು, ಈ ತಂಡ ರೈಲು ದುರಂತದಲ್ಲಿ ಸಿಲುಕಿರುವ ಕನ್ನಡಿಗರಿಗೆ ಎಲ್ಲ ರೀತಿಯ ನೆರವನ್ನು ನೀಡಲಿದೆ.
ಸಂತೋಷ್‌ಲಾಡ್ ಮನವಿ
ರೈಲು ದುರಂತದಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ. ಯಾರಿಗಾದರೂ ಮಾಹಿತಿ ಬೇಕಿದ್ದರೆ ೯೮೪೫೭೩೯೯೯೯ಗೆ ದೂರವಾಣಿ ಮಾಡುವಂತೆ ಸಚಿವ ಸಂತೋಷ್‌ಲಾಡ್ ಹೇಳಿದ್ದಾರೆ.
ನೆರವಿಗಾಗಿ ಸಹಾಯವಾಣಿ
ರಾಜ್ಯ ತುರ್ತು ನಿರ್ವಹಣಾ ಕೇಂದ್ರದಲ್ಲಿ ನಾಗರಿಕರ ಅನುಕೂಲಕ್ಕಾಗಿ ಸಹಾಯವಾಣಿ ಸಂಖ್ಯೆ-೧೦೭೦ ೦೮೦ ೨೨೨೫೩೭೦೭, ೦೮೦ ೨೨೩೪೦೬೭೬ ತೆರೆಯಲಾಗಿದೆ.