ಘಟಕಪ್ರಭಾ ರೇಲ್ವೆ ನಿಲ್ದಾಣ ಮೇಲ್ದರ್ಜೆ ಕಾಮಗಾರಿಗೆ ಶಂಕುಸ್ಥಾಪನೆ

ಬೆಳಗಾವಿ,ಆ.7: ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ/ (ಪುನರಾಭಿವೃದ್ಧಿ ಕಾರ್ಯಕ್ರಮ) ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ರವಿವಾರ ನೆರವೇರಿಸಿದರು.
ವರ್ಚ್‍ವಲ್ ಕಾರ್ಯಕ್ರಮದ ನಿಮಿತ್ಯ ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಬೃಹತ್ ವೇದಿಕೆ ಹಾಕಲಾಗಿತ್ತು. ಈ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭಾ ಸಂಸದ ಈರಣ್ಣಾ ಕಡಾಡಿ, ಮುಂಬರುವ ದಿನಗಳಲ್ಲಿ ಘಟಪ್ರಭಾ ರೈಲು ನಿಲ್ದಾಣ ಭಾರತ ರೈಲ್ವೆ ಭೂಪಟದಲ್ಲಿ ರಾರಾಜಿಸಲಿದೆ ಎಂದು ಹೇಳಿದರು. ಈ ಯೋಜನೆಯಡಿ ಘಟಪ್ರಭಾ ರೈಲ್ವೆ ನಿಲ್ದಾಣ 18 ಕೋ.ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿಲ್ದಾಣದ ಕಟ್ಟಡವನ್ನು ಸುಧಾರಿಸಲಾಗುವುದು. 12 ಮೀಟರ್ ಅಗಲದ ಫುಟ್ ಓವರ್ ಬ್ರಿಡ್ಜ್ ಅನ್ನು 2 ಲಿಫ್ಟ್ಗಳೊಂದಿಗೆ ನಿರ್ಮಿಸಲಾಗುತ್ತದೆ ಎಂದರು.
ಸಂಸದ ಕಡಾಡಿ ಅವರು ಜಿಲ್ಲೆಯ ಎರಡು ರೈಲು ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವಿ ಅವರನ್ನು ಮತ್ತು ರೈಲ್ವೆ ಅಧಿಕಾರಿಗಳನ್ನು ಸ್ಮರಿಸಿದರು. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಕೇಂದ್ರ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇದೇ ಸಂದರ್ಭದಲ್ಲಿ ಸಂಸದರು ವಿವರಿಸಿದರು.
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೋಸ್ಕರ 100 ಹಾಸಿಗೆಗಳ ಇಎಸ್‍ಎಆಯ್ ಆಸ್ಪತ್ರೆ, ಉಡಾಣ ಯೋಜನೆಯಡಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಸೇರ್ಪಡೆ ಮತ್ತು 190 ಕೋ.ರೂ. ವೆಚ್ಚದಲ್ಲಿ ಬೆಳಗಾವಿ ರೈಲು ನಿಲ್ದಾಣದ ಅಭಿವೃದ್ಧಿ ಸೇರಿದಂತೆ ಇನ್ನು ಅನೇಕ ಯೋಜನೆಗಳಿಗೆ ಪ್ರಧಾನಿ ಮೋದಿಯವರು ಸಾಕಷ್ಟ ಅನುದಾನವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಮಾತನಾಡಿ, ಮಾಜಿ ಸಂಸದ ದಿ. ಸುರೇಶ ಅಂಗಡಿಯವರ ಪ್ರಯತ್ನದಿಂದ ಪಟ್ಟಣದ ರೈಲು ನಿಲ್ದಾಣ ಮೇಲ್ದರ್ಜೆಗೇರಿತ್ತು, ಈಗ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ರೈಲು ನಿಲ್ದಾಣ ಆಯ್ಕೆಯಾಗಿರುವುದರಿಂದ ನಿಲ್ದಾಣ ಮತ್ತಷ್ಟು ವೈಭವ ಪಡೆಯಲಿದೆ ಎಂದರು.

ಕಾರ್ಯಕ್ರಮದ ವೇದಿಕೆಯ ಮೇಲೆ ರಾಯಭಾಗ ಶಾಸಕರಾದ ದುರ್ಯೋಧನ ಐಹೋಳೆ, ಖಾನಾಪೂರ ಶಾಸಕರಾದ ವಿಠಲ ಹಲಗೇಕರ, ಮಾಜಿ ಶಾಸಕರಾದ ಎಮ್.ಎಲ್.ಮುತ್ತೇನ್ನವರ, ಪುರಸಭೆ ಮುಖ್ಯಾಧಿಕಾರಿ ಎಮ್ ಎನ್. ಪಾಟೀಲ, ರೈಲ್ವೆ ಇಲಾಖೆಯ ಚೀಫ್ ಕಮರ್ಷಿಯಲ್ ಇನ್ಸ್‍ಸ್ಪೆಕ್ಟರ್ ಸಾಧು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.