ಗ್ಲೌಕೊಮಾ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ

ಕಲಬುರಗಿ:ಮಾ.18:ಗ್ಲೌಕೊಮಾವು ಕಾಯಿಲೆಯು ಕಣ್ಣಿಗೆ ಸಂಬಂಧಿಸಿದ್ದು, ದೃಷ್ಟಿನರಗಳು ಹಾನಿಗೊಳಗಾಗುವ ಕಾರಣದಿಂದ ಉಂಟಾಗುತ್ತದೆ. ಯಾವುದೇ ಮುನ್ಸೂಚನೆ ನೀಡದೆ ದೃಷ್ಟಿನಾಶ ಮಾಡುತ್ತದೆ. ಇದರ ಬಗ್ಗೆ ಬಹಳಷ್ಟು ಜನರಿಗೆ ತಮ್ಮ ಅರಿವಿಗೆ ಬರುವದಿಲ್ಲ. ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡುವದರಿಂದ ಅದರ ಪರಿಣಾಮ ಕಡಿಮೆಗೊಳಿಸಬಹುದಾಗಿದ್ದು, ಅದರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಜ್ಯೋತಿ ಐ ಕೇರ್ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಲಾಗಿದ್ದ ‘ವಿಶ್ವ ಗ್ಲೌಕೊಮಾ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇದೊಂದು ವಂಶಪಾರಂಪರೆಯ ಕಾಯಿಲೆಯಾಗಿದ್ದು, ಒಂದು ಮನೆಯಲ್ಲಿ ಒಬ್ಬ ವ್ಯಕ್ತಿಗೆ ಈ ರೋಗ ಬಂದರೆ, ಅವರ ಸಹೋದರ ಮತ್ತು ಮಕ್ಕಳಲ್ಲಿ ಬರುವ ಸಂಭವ ಹೆಚ್ಚಾಗಿದೆ. ಇದಕ್ಕೆ ಔಷಧದ ಹನಿ ಬಳಸಲಾಗುತ್ತದೆ. ಜೊತಗೆ ಕೆಲವು ಸಂದರ್ಭಗಳಲ್ಲಿ ಲೇಸರ್ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ಮಾಡಲಾಗುತ್ತದೆ. ನಿರಂತರವಾಗಿ ಕಂಪ್ಯೂಟರ, ಟಿವಿ ಮತ್ತು ಮೋಬೈಲ್ ವೀಕ್ಷಣೆ ಬೇಡ, ಹಸಿರು ತರಕಾರಿ, ಹಾಲು, ಹಣ್ಣು, ವಿಟಾಮಿನ್-ಎ ಇರುವ ಆಹಾರವನ್ನು ಸೇವಿಸುವುದು, ಪ್ರಖರ ಹಾಗೂ ಮಬ್ಬಾದ ಬೆಳಕಿನಲ್ಲಿ ಓದಬಾರದು, ನಿರಂತರವಾಗಿ ಓದದೇ, 45 ನಿಮಿಷಗಳ ನಂತರ ಕಡ್ಡಾಯವಾಗಿ ಕಣ್ಣಿಗೆ 10 ನಿಮಿಷ ವಿಶ್ರಾಂತಿ ನೀಡಬೇಕು ಎಂದು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಅಮರ ವಾರಿಕ್, ಚನ್ನು ಜಿ.ಹಿರೇಮಠ, ಮಲ್ಲಿನಾಥ ಎಸ್.ಪಾಟೀಲ ಸೇರಿದಂತೆ ಮತ್ತಿತರರಿದ್ದರು.