ಗ್ಲುಕೋಮಾ ಕಾಯಿಲೆ ಕಡೆಗಣಿಸಬೇಡಿ: ಡಾ. ವೀಣಾ

ಕಲಬುರಗಿ,ಮಾ.15: ಭಾರತದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ಜನರು ಗ್ಲುಕೋಮಾ ಕಾಯಿಲೆಯಿಂದ ಬಳಲುತ್ತಿದ್ದು ಇದರಲ್ಲಿ ಶೇಕಡ 8ರಿಂದ 10ರಷ್ಟು ಅಂದರೆ ಹತ್ತರಿಂದ ಹನ್ನೆರಡು ಲಕ್ಷ ಜನ ದೃಷ್ಟಿ ಹೀನರಾಗಿದ್ದಾರೆ ಆದುದರಿಂದ ಕಡೆಗಣಿಸದಿರಿ ಎಂದು ಕಲ್ಬುರ್ಗಿ ಯುನೈಟೆಡ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ವೀಣಾ ವಿಕ್ರಮ್ ಸಿದ್ಧಾರಡ್ಡಿ ಹೇಳಿದ್ದಾರೆ.
ಕಲ್ಬುರ್ಗಿ ಆಕಾಶವಾಣಿಯಲ್ಲಿ ಮಾರ್ಚ್ 15 ರಂದು “ಜೊತೆ ಜೊತೆಯಲಿ” ನೇರ ಫೋನ ಸಂವಾದದಲ್ಲಿ ಅಂತರಾಷ್ಟ್ರೀಯ ಗ್ಲುಕೋಮಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಗ್ಲುಕೋಮ ಕಾಯಿಲೆಯಿಂದ ರಕ್ಷಣೆ ಕುರಿತಾಗಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕಣ್ಣಿನ ನರದಲ್ಲಿ ಬರುವ ಒತ್ತಡದ ಸಮಸ್ಯೆಯಿಂದ ದೃಷ್ಟಿ ತೊಂದರೆಯಾಗುತ್ತಿದ್ದು ಇದು ಯಾವುದೇ ಲಕ್ಷಣವನ್ನು ವ್ಯಕ್ತಪಡಿಸದೆ ಬರುವ ಕಾಯಿಲೆಯಾಗಿದ್ದು ನಿರಂತರವಾಗಿ ಪರೀಕ್ಷೆಗೆ ಒಳಪಡುವುದರಿಂದ ಪತ್ತೆಹಚ್ಚಲು ಸಾಧ್ಯ ಎಂದು ಹೇಳಿದರು. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಅನುವಂಶಿಕತೆ ಹಾಗೂ ಇತರ ಕಾರಣಗಳಿಂದಾಗಿ ಗ್ಲುಕೋಮ ಕಂಡು ಬರುತ್ತಿದ್ದು ಈ ಬಗ್ಗೆ ಜಾಗೃತರಾಗಿ ನಿರಂತರ ಕಣ್ಣಿನ ತಪಾಸಣೆ. ಉತ್ತಮ ಆಹಾರ ಕ್ರಮ, ವ್ಯಾಯಾಮ ಮಾಡುವುದರಿಂದ ತಡೆಗಟ್ಟಲು ಸಾಧ್ಯ. ಕನಿಷ್ಠ ಮೂರು ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಎಂದು ಉತ್ತಮ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಭೀಮಸೇನರಾವ್ ಕುಲಕರ್ಣಿ, ಅಮಿತ್, ರವಿ, ಡಾ. ಸತೀಶ್ ಕುಮಾರ್, ಜ್ಯೋತಿ, ಶ್ಯಾಮಲಾ ಸ್ವಾಮಿ, ಚಿಂಚೋಳಿಯ ಸಿದ್ದರಾಮ ಕಂಬಾರ, ವಾಸುದೇವ ಪಾಟೀಲ್, ವೈಜಾಪುರ್ ಯಾದಗಿರಿಯ ರಾಘವೇಂದ್ರ ಭಕ್ರಿ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಡಾಕ್ಟರ್ ಸದಾನಂದ ಪೆರ್ಲ ನಡೆಸಿಕೊಟ್ಟರು.ಸಂಗಮೇಶ್ ಮತ್ತು ಲಕ್ಷ್ಮಿಕಾಂತ ಪಾಟೀಲ್ ನೆರವಾದರು. ಪಿ ಈಶ್ವರ್ ತಾಂತ್ರಿಕ ಸಹಾಯ ನೀಡಿದರು.