ಗ್ರೀನ್ ಹೀರೋ ಅನಂತ್‌ನಾಗ್ ಬಣ್ಣದ ಬದುಕಿಗೆ 50 ವರ್ಷ

ಬೆಂಗಳೂರು,ಆ.೩- ಕನ್ನಡ ಚಿತ್ರರಂಗದ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಪಡೆದಿರುವ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಅವರ ಚಿತ್ರ ಯಾನಕ್ಕೆ ೫೦ ವಸಂತಗಳು ತುಂಬಿವೆ.
೧೯೭೩ರಲ್ಲಿ ಸಂಕಲ್ಪ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿರಿಸಿದ ನಟ ಅನಂತ್ ನಾಗ್, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ, ತೆಲುಗು, ಮರಾಠಿ, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದವರು. ಜೊತೆ ಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅಪ್ರತಿಮ ಕಲಾವಿದ.
ಬಣ್ಣದ ಬದುಕಿನಲ್ಲಿ ಸುವರ್ಣ ಮಹೋತ್ಸವದ ಆಚರಣೆ ಸಂಭ್ರಮದಲ್ಲಿರುವ ನಟ ಅನಂತ್‌ನಾಗ್ ಅವರಿಗೆ ಚಿತ್ರರಂಗದ ಹಿರಿಯ ನಟರು, ಸೇರಿದಂತೆ ಎಲ್ಲೆಡೆ ಅಭಿಮಾನದ ಶುಭ ಹಾರೈಕೆ ಹರಿದು ಬರುತ್ತಿದೆ.
ಹಿರಿಯ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್‌ಕುಮಾರ್, ಡಾಲಿ ಧನಂಜಯ, ನಟ ರಿಷಬ್ ಶೆಟ್ಟಿ, ಯುವ ನಟ ಧೀರೇನ್ ರಾಮ್ ಕುಮಾರ್ ಸೇರಿದಂತೆ ಅನೇಕ ಮಂದಿ ಶುಭಹಾರೈಸಿ ಹಿರಿಯ ನಟನಿಗೆ ಅಭಿಮಾನದ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನಂತ್‌ನಾಗ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ೫೦ ವರ್ಷಗಳ ಚಿತ್ರರಂಗದ ಅನುಭವದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಎಲ್ಲರ ಮೆಚ್ಚುಗೆ ಶಹಬ್ಬಾಸ್‌ಗಿರಿ ಪಡೆದ ಅಪರೂಪದ ಕಲಾವಿದರಲ್ಲಿ ಒಬ್ಬರು.
ಡಾ.ರಾಜ್‌ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಸಹೋದರ ಶಂಕರ್‌ನಾಗ್ ಸೇರಿದಂತೆ ಅನೇಕರ ಜೊತೆ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದವರು. ನಾಯಕನಾಗಿ ಹತ್ತಾರು ಯಶಸ್ವಿ ಚಿತ್ರ ನೀಡಿದ ಹೆಗ್ಗಳಿಕೆಯೂ ಅನಂತ್‌ನಾಗ್ ಅವರಿಗೆ ಸಲ್ಲಲಿದೆ.
೫೦ ವರ್ಷ ಬಣ್ಣದ ಬದುಕಿನಲ್ಲಿ ಪೂರ್ಣಗೊಳಿಸಿರುವ ಅನಂತ್‌ನಾಗ್ ಅವರು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯಯಾಗಿದ್ದಾರೆ. ಸಾಲು ಸಾಲು ಪೋಷಕ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬರುತ್ತಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಮಿಂಚಿ ಇದೀಗ ಪೋಷಕ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೫೦ ವರ್ಷದ ಚಿತ್ರರಂಗದ ಹಾದಿ ಸವೆಸಿದ ಕನ್ನಡದ ಕೆಲವೇ ಕೆಲವು ನಟರಲ್ಲಿ ಅನಂತ್‌ನಾಗ್ ಕೂಡ ಒಬ್ಬರು ಎನ್ನುವುದು ಹೆಗ್ಗಳಿಕೆ ವಿಷಯ.
ಅನಂತ್ ಸರ್ ಪ್ರೇರಣೆ
ಕನ್ನಡ ಚಿತ್ರರಂಗದಲ್ಲಿ ೫೦ ವರ್ಷ ಪೂರ್ಣಗೊಳಿಸಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ನಿಮ್ಮ ಪ್ರತಿಭೆ ಮತ್ತು ವರ್ಚಸ್ಸು ತಲೆಮಾರುಗಳಿಗೆ ಪ್ರೇರಣೆ
_ ಡಾ. ಶಿವರಾಜ್‌ಕುಮಾರ್, ಹಿರಿಯ ನಟ
ಸ್ಪೂರ್ತಿದಾಯಕ
ಕನ್ನಡ ಚಿತ್ರರಂಗದ ಮೇರು ನಟ ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಅವರು ಚಿತ್ರರಂಗದಲ್ಲಿ ೫೦ ವಸಂತ ಪೂರೈಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದ ಅನಂತ ಪದ್ಮನಾಭ ಅವರಿಗೆ ಶುಭಾಷಯಗಳು, ನಿಮ್ಮ ಪಯಣ ಸ್ಪೂರ್ತಿದಾಯಕ,ಶುಭವಾಗಲಿ.
-ರಿಷಬ್ ಶೆಟ್ಟಿ, ನಟ,ನಿರ್ದೇಶಕ