ಗ್ರೀನ್ ಟೈಗರ್ಸ್‍ಗೆ ಪ್ರಥಮ ಡಿವಿಜನ್ ಫುಟ್ಬಾಲ್ ಪ್ರಶಸ್ತಿ


ಧಾರವಾಡ ಮಾ.29- ಹುಬ್ಬಳ್ಳಿಯ ಗ್ರೀನ್ ಟೈಗರ್ಸ್ ಫುಟ್ಬಾಲ್ ಕ್ಲಬ್ ಧಾರವಾಡ ಜಿಲ್ಲಾ ಫುಟ್ಬಾಲ್ ಸಂಸ್ಥೆ(ಡಿ.ಡಿ.ಎಫ್.ಎ.)ಯ ಆಶ್ರಯದಲ್ಲಿ ನಡೆದ ಪ್ರಥಮ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿ ಜಯಗಳಿಸಿದೆ.
ನಗರದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ರವಿವಾರ ಸಂಜೆ ನಡೆದ ಅಂತಿಮ ಪಂದ್ಯದಲ್ಲಿ ಗ್ರೀನ್ ಟೈಗರ್ಸ್ ಹುಬ್ಬಳ್ಳಿಯದೇ ಆದ ಪವನ್ ಬಾಯ್ಸ್ ಫುಟ್ಬಾಲ್ ಕ್ಲಬ್ ಎದುರು ನಿಗದಿತ ಸಮಯದಲ್ಲಿ 3-2 ಗೋಲುಗಳ ಗೆಲುವು ದಾಖಲಿಸಿತು.
ಪಂದ್ಯದ ಏಳನೇ ನಿಮಿಷದಲ್ಲಿಯೇ ಯೋಗೇಶ ಬಾರಿಸಿದ ಗೋಲಿನಿಂದ ಖಾತೆ ಆರಂಭಿಸಿದ ಗ್ರೀನ್ ಟೈಗರ್ಸ್ ಮಧ್ಯಂತರ ವಿರಾಮದ ಹೊತ್ತಿಗೆ 1-0 ಲೀಡ್ ಪಡೆದಿತ್ತು. ವಿರಾಮದ ನಂತರವೂ ಪಂದ್ಯದ ಮೇಲೆ ಹಿಡಿತ ಉಳಿಸಿಕೊಂಡ ಅದಕ್ಕೆ 25ನೇ ನಿಮಿಷದಲ್ಲಿ ಆ್ಯಂಥನಿ ಜೋಸೆಫ್ ಎರಡನೇ ಗೋಲು ತಂದಿತ್ತರೆ, ನಾಲ್ಕು ನಿಮಿಷಗಳ ನಂತರ ಗಿರೀಶ ಗ್ರೀನ್ ಟೈಗರ್ಸ್ ಮುನ್ನಡೆಯನ್ನು 3-0ಗೆ ಏರಿಸಿದರು.
ಆ ನಂತರ ಆಟದ ಲಯ ಕಂಡುಕೊಂಡಂತೆ ಆಡಿದ ಪವನ್ ಬಾಯ್ಸ್ ಪರ ಆ್ಯಂಥನಿ 31 ಹಾಗೂ 40ನೇ ನಿಮಿಷಗಳಲ್ಲಿ ಎರಡು ಗೋಲು ಬಾರಿಸಿ ಎದುರಾಳಿ ಮುನ್ನಡೆಯನ್ನು 3-2ಕ್ಕಿಳಿಸಿದರು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದ ಪೆನಾಲ್ಟಿ ಶೂಟ್-ಔಟ್‍ನಲ್ಲಿ ಪವನ್ ಬಾಯ್ಸ್ ಫುಟ್ಬಾಲ್ ಕ್ಲಬ್ ಸ್ಥಳೀಯ ಸಾಕ್ಕರ್‍ಹೋಲಿಕ್ಸ್ ಫುಟ್ಬಾಲ್ ಕ್ಲಬ್‍ಗೆ 3-0 ಗೋಲುಗಳ ಆಘಾತ ನೀಡಿತು. ಫೀಲ್ಡ್‍ನಲ್ಲಿ ಸ್ಕೋರು ಮಾಡುವ ಹಲವು ಅವಕಾಶಗಳನ್ನು ಕೈಚೆಲ್ಲಿದ ಸಾಕ್ಕರ್‍ಹೋಲಿಕ್ಸ್ ಫುಟ್ಬಾಲ್ ಕ್ಲಬ್ ಫೈನಲ್ ಪ್ರವೇಶಿಸುವಲ್ಲಿ ಎಡವಿತು. ಎರಡನೇ ಸೆಮಿಫೈನಲ್‍ನಲ್ಲಿ ಗ್ರೀನ್ ಟೈಗರ್ಸ್ ಸ್ಥಳೀಯ ವಿದ್ಯಾಗಿರಿ ಫುಟ್ಬಾಲ್ ಕ್ಲಬ್ ಎದುರು 2-0 ಗೋಲುಗಳ ಸುಲಭದ ಗೆಲುವು ದಾಖಲಿಸಿತ್ತು.
ನಂತರ ನಡೆದ ಮುಕ್ತಾಯ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ರವಿಕುಮಾರ ಮಾಳಿಗೇರ ಹಾಗೂ ಕ್ರೀಡಾ ವೈದ್ಯಕೀಯ ತಜÐ ಡಾ.ಕಿರಣಕುಮಾರ ಕುಲಕರ್ಣಿ ಪ್ರಶಸ್ತಿ ವಿತರಿಸಿದರು. ರಾಹುಲ್‍ಕುಮಾರ(ಗ್ರೀನ್ ಟೈಗರ್ಸ್) ಟೂರ್ನಿಯ ಅತ್ಯುತ್ತಮ ಆಟಗಾರ ಎನಿಸಿಕೊಂಡರೆ, ಶ್ಯಾಮಸುಂದರ(ಪವನ ಬಾಯ್ಸ್) ಅತ್ಯುತ್ತಮ ಗೋಲ್‍ಕೀಪರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಧಾರವಾಡ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಾ. ಉಮೇಶ ಮುಕ್ತಾಮಠ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ.ಎಫ್.ಎ. ಕಾರ್ಯದರ್ಶಿ ಮಾರುತಿ ಮತ್ತೂರ ಉಪಸ್ಥಿತರಿದ್ದರು.