ಗ್ರಾ.ಪಂ. ಸಿಬ್ಬಂದಿಯಿಂದ ಬಣ್ಣಾರಿ ಜಾತ್ರೆಯಲ್ಲಿ ಮತದಾನ ಬಗ್ಗೆ ಜಾಗೃತಿ

ಚಾಮರಾಜನಗರ, ಏ.12:- 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಬಣ್ಣಾರಿ ಅಮ್ಮನವರ ಜಾತ್ರೆಯಲ್ಲಿ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ನಂಜೇದೇವನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವೀರನಪುರ ಕ್ರಾಸ್ ಬಳಿಯ ಶ್ರೀ ಬಣ್ಣಾರಿ ಅಮ್ಮನ್ ದೇವಸ್ಥಾನದಲ್ಲಿ ಇಂದು ಕೊಂಡೋತ್ಸವ ನಡೆಯಿತು. ವೀರನಪುರ, ಉಡಿಗಾಲ, ಕಡುವಿನ ಕಟ್ಟೆ ಹುಂಡಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪಂಚಾಯಿತಿ ಅಧಿಕಾರಿಗಳು ಆಟೋದಲ್ಲಿ ಪ್ರಚಾರ ಮಾಡುವ ಜೊತೆಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು.
ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ವೀಣಾ ಮಾತನಾಡಿ, ಪ್ರತಿ ವರ್ಷಕೊಮ್ಮೆ ಬರುವ ಜಾತ್ರೆಯಂತೆ ಐದು ವರ್ಷಕೊಮ್ಮೆ ಬರುವ ಚುನಾವಣೆಯು ಸಹ ಹಬ್ಬ ಇದ್ದಂತೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಮತದಾನ ಹಕ್ಕು ನೀಡುವ ಮೂಲಕ ಪ್ರಜಾ ಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು ಎಂದು ಹೇಳಿದ್ದಾರೆ. ಈ ಚುನಾವಣೆ ಎಂಬ ಜಾತ್ರೆಯು ಇದೇ ಮೇ 10 ರಂದು ನಡೆಯಲಿದ್ದು, ಎಲ್ಲರು ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ.ಎಂ. ಮಹದೇವಪ್ಪ, ಬಿಲ್‍ಕಲೆಕ್ಟರ್ ಬೆಳ್ಳಯ್ಯ, ಪುಟ್ಟಸುಬ್ಬಮ್ಮ, ವಾಟರ್‍ಮ್ಯಾನ್ ಮಹದೇವಪ್ಪ ಇತರರು ಇದ್ದರು.