ಗ್ರಾ. ಪಂ. ಸದಸ್ಯರು ಕೊಡುವ ಹಕ್ಕು ಪತ್ರಗಳನ್ನು ಜ. 19ರಂದು ಪ್ರಧಾನಿಯಿಂದ ವಿತರಿಸುತ್ತಿದ್ದಾರೆ: ಕುಮಾರಸ್ವಾಮಿ ಟೀಕೆ

ಕಲಬುರಗಿ,ಜ.11: ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಸಕರು ಕೊಡಬೇಕಾದ ಮನೆಗಳ ಹಕ್ಕು ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಇದೇ ಜನವರಿ 19ರಂದು ಬಿಜೆಪಿಯವರು ಮಳಖೇಡದಲ್ಲಿ ಕೊಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಸೇಡಂ ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ಬುಧವಾರ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂಡಾ ಹಾಗೂ ಗೊಲ್ಲರಹಟ್ಟಿಯಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಇಲ್ಲವೇ ಕ್ಷೇತ್ರದ ಶಾಸಕರು ಕೊಡುತ್ತ ಬಂದಿದ್ದಾರೆ. ಆದಾಗ್ಯೂ, ಬಿಜೆಪಿಯವರು ಅದಕ್ಕಾಗಿ ಪ್ರಧಾನಿಯನ್ನು ಕರೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕೇಂದ್ರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಪಕ್ಷವನ್ನು ಕುಟುಂಬ ರಾಜಕೀಯದ ಪಕ್ಷವೆಂದು ಟೀಕಿಸಿದ್ದಕ್ಕೆ ಆಕ್ಷೇಪಿಸಿದ ಎಚ್.ಡಿ. ಕುಮಾರಸ್ವಾಮಿ ಅವರು, ಅವರ ಕುಟುಂಬ ರಾಜಕೀಯದ ಕುರಿತು ಹುಬ್ಬಳ್ಳಿಯಲ್ಲಿಯೇ ಅವರಿಗೆ ಉತ್ತರ ಕೊಡುತ್ತೇನೆ ಎಂದರು.
ಕುಟುಂಬ ರಾಜಕೀಯ ಎಂದರೇನು?, ಅದು ಕೇವಲ ಜಾತ್ಯಾತೀತ ಜನತಾದಳದಲ್ಲಿ ಅಷ್ಟೇ ಇದೆಯೇ?, ಅವರ ಪಕ್ಷದಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಬ್ಯಾಂಕ್ ದೋಕಾದಲ್ಲಿ ಸೇರಿದ್ದರು. ಅದನ್ನು ಮುಚ್ಚಿಹಾಕಲಾಯಿತು. ಆಡಳಿತದಲ್ಲಿ ಹಸ್ತಕ್ಷೇಪದ ಕುರಿತು ಹುಬ್ಬಳ್ಳಿಯಲ್ಲಿಯೇ ಮಾತನಾಡುತ್ತೇನೆ ಎಂದು ಅವರು ಎಚ್ಚರಿಸಿದರು.
ನನ್ನ ರಾಜ್ಯದ ಆರೂವರೆ ಕೋಟಿ ಜನರೇ ನನ್ನ ಕುಟುಂಬ ಎಂದು ಭಾವಿಸಿದ್ದೇನೆ. ಚಿಂಚೋಳಿಯಲ್ಲಿ ಪಂಚರತ್ನ ರಥಯಾತ್ರೆ ಹೋದಾಗ ಮಹಿಳೆಯೊಬ್ಬಳೂ ವೇದಿಕೆಯ ಮೇಲೆ ಬಂದು ನನಗೆ ನೀವು ಸಹಾಯ ಮಾಡಿದ್ದೀರಿ. ಅಂಗವಿಕಲ ನನ್ನ ಪುತ್ರಿಗೆ ನೀವು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರಿ ಕೊಡಿಸಿದ್ದೀರಿ. ಈಗ ಆಕೆ 75000ರೂ.ಗಳ ವೇತನ ಪಡೆಯುತ್ತಿದ್ದಾಳೆ. ಇಡೀ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದಳು. ಅದು ನನ್ನ ಕುಟುಂಬ ಎಂದು ಅವರು ತಿಳಿಸಿದರು.
ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ. ರವಿ ಬಂಧನದ ಹೆಸರಿನಲ್ಲಿ ಬಿಜೆಪಿ ಟೋಪಿ ಹಾಕುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು. ಬಿಜೆಪಿ ಪಕ್ಷದವರು ಪವಿತ್ರವಾದ ಕೇಸರಿ ಬಟ್ಟೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿತನದ್ದು. ಇತಹವರು ದೇಶಕ್ಕೆ ಉಪದೇಶ ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.
ಜಗದೀಶ್ ಎಂಬ ವ್ಯಕ್ತಿ ಕಳೆದ ಜನವರಿ 22ರಂದು ಸ್ಯಾಂಟ್ರೋ ರವಿ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆ ವೇಳೆ ಸ್ಯಾಂಟ್ರೋ ರವಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಬರೆದುಕೊಟ್ಟಿದ್ದಾನೆ. ಆತ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಬಿಜೆಪಿಯ ಹಲವು ಶಾಸಕರು ಹಾಗೂ ಸಚಿವರೊಂದಿಗೆ ಒಡನಾಟ ಹೊಂದಿದ್ದ. ಹೀಗಾಗಿ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದಾಗಿ ಆತ ಪೋಲಿಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ಆತನನ್ನು ಹೇಗೆ ಬಂಧಿಸುತ್ತಾರೋ ಹಾಗೂ ಯಾವ ರೀತಿ ತನಿಖೆ ಮಾಡುತ್ತಾರೋ ನೋಡೋಣ ಎಂದು ಅವರು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರು ಉಪಸ್ಥಿತರಿದ್ದರು.