ಗ್ರಾ.ಪಂ. ನೌಕರರ ಸಮ್ಮೇಳನ

ಲಕ್ಷ್ಮೇಶ್ವರ,ಜು.31: ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಗ್ರಾಮ ಪಂಚಾಯತಿ ನೌಕರರ ಎಂಟನೇ ಸಮ್ಮೇಳನ ಜರುಗಿತು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಗ್ರಾಮ ಪಂಚಾಯತಿ ನೌಕರರ ಬೃಹತ್ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಂಭಾಪುರಿ ಸಮುದಾಯ ಭವನದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಗ್ರಾಮ ಪಂಚಾಯಿತಿ ನೌಕರರ ಎಂಟನೆಯ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷರಾದ ಎಂ.ಬಿ.ನಾಡಗೌಡರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದ್ದು ಕನಿಷ್ಠ ವೇತನವನ್ನು ಸಹ ನೀಡದೆ ಗೋಳು ಹೊಯ್ದುಕೊಳ್ಳುತ್ತಿದೆ. 5 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕಾದ ಸರ್ಕಾರ ಪಂಚಾಯತಿ ಸಿಬ್ಬಂದಿಯನ್ನು ಸಂಪೂರ್ಣ ಕಡೆಗಣಿಸಿದ್ದು ಜೀವನ ನಿರ್ವಹಣೆಯ ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಕನಿಷ್ಠ 27 ಸಾವಿರ ವೇತನ ನೀಡಬೇಕು ಎಂದು ಹೇಳಿದರು.
ಜನಪ್ರತಿನಿಧಿಗಳು ತಾವೇ ಕಾನೂನು ಮಾಡುತ್ತಿದ್ದು ತಮ್ಮ ವೇತನವನ್ನು ಹೆಚ್ಚಳ ಮಾಡಿಕೊಂಡಾಗ ಯಾವ ಕಾನೂನುಗಳು ಇವರಿಗೆ ಅಡ್ಡಿ ಬರಲಿಲ್ಲ ದುಡಿಯುವ ವರ್ಗದವರಿಗೆ ವೇತನ ನೀಡಿ ಎಂದರೆ ಇಲ್ಲಸಲ್ಲದ ಕಾನೂನಿನ ನೆಪವೊಡ್ಡಿ ನಿರಾಕರಿಸುತ್ತಿದ್ದಾರೆ.
ಈ ಸರ್ಕಾರಕ್ಕೆ ಕಣ್ಣು, ಕಿವಿ ಕೂಡ ಇಲ್ಲ ಹೇಗಾದರೂ ಮಾಡಿ ಗ್ರಾಮ ಪಂಚಾಯತಿ ನೌಕರರನ್ನು ಸಹ ತೆಗೆದು ಕುಡಿಯುವ ನೀರು ನೈರ್ಮಲ್ಯ ಇತರ ಸೌಲಭ್ಯಗಳನ್ನು ಖಾಸಗಿಕರಣಗೊಳಿಸುವ ಹುನ್ನಾರ ನಡೆಸಿದೆ ಎಂದರು. ಸೌಲಭ್ಯ ಪಡೆಯಲು ಗ್ರಾಮ ಪಂಚಾಯಿತಿ ನೌಕರರು ಒಗ್ಗಟ್ಟಿನಿಂದ ಸಂಘಟನೆಯಿಂದ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಮಿತಿಯ ಅಧ್ಯಕ್ಷ ಬಸವರಾಜ ಮಂಟೂರ, ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಕಂದಗಲ, ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಫೀರೂ ರಾಥೋಡ, ಬಿ.ಎಸ್. ಹರ್ಲಾಪುರ, ಎಸ್.ವೈ. ಕುಂಬಾರ, ರಮೇಶ ಲಮಾಣಿ, ಮಲ್ಲಿಕಾರ್ಜುನ ಕಳಸಾಪುರ ಸೇರಿದಂತೆ ಅನೇಕರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಅರ್ಕಸಾಲಿ, ಈಶ್ವರ ದಮನಿ ವಹಿಸಿದ್ದರು. ನಾಗರಾಜ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.