ಗ್ರಾ.ಪಂ.ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪತ್ರಿಭಟನೆ

ಕೋಲಾರ,ನ,೨೧-ಗ್ರಾಮ ಪಂಚಾಯಿತಿ ನೌಕರರಿಗೆ ಬಾಕಿ ಇರುವ ವೇತನ ಪಾವತಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ನಗರದ ಜಿಲ್ಲಾ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.
ಸರಕಾರವು ತೆರಿಗೆ ಸಂಗ್ರಹದಲ್ಲಿ ೧೪ ನೇ ಮತ್ತು ೧೫ ನೇ ಹಣಕಾಸಿನ ಯೋಜನೆಯಲ್ಲಿ ಸಂಬಳ ಕೊಡಬೇಕೆಂದು ಆದೇಶ ಹೊರಡಿಸಿದ್ದರು. ಪಂಚಾಯಿತಿ ನೌಕರರಿಗೆ ಪಿಡಿಓಗಳು ಸರ್ಕಾರ ನಿಗಧಿ ಪಡಿಸಿದ ಕನಿಷ್ಟ ವೇತನ ಜಾರಿ ಮಾಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನು ಸರ್ಕಾರದಿಂದ ವೇತನ ಪಾವತಿಗೆ ಹಲವಾರು ತಿಂಗಳುಗಳು ಕಳೆದರೂ ಗ್ರಾಮ ಪಂಚಾಯಿತಿಗಳಲ್ಲಿ ಆದೇಶಗಳು ಜಾರಿಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾ ಸಿಐಟಿಯು ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿ ಕಾಯ್ದೆ ೧೧೩ ಅಡಿಯಲ್ಲಿ ಉಪ ಕಲಂ ೧,೨,೩ ರಲ್ಲಿ ಪಿಡಿಓ ಪಂಚಾಯಿತಿ ನೌಕರರ ವಿಷಯಗಳನ್ನು ತಿರ್ಮಾನ ಮಾಡುವ ಅಧಿಕಾರ ಹೊಂದಿದ್ದರೂ ಪಿಡಿಓ ಗಳು ಸರ್ಕಾರಿ ಆದೇಶಗಳನ್ನು ಜಾರಿ ಮಾಡದೇ ಪಂಚಾಯಿತಿ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಪಂಪ್ ಆಪರೇಟರ್‌ದಿಂದ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ಹಾಗೂ ಬಿಲ್ ಕಲೆಕ್ಟರ್‌ನಿಂದ ಕಾರ್ಯದರ್ಶಿ ಗ್ರೇಡ್-೨, ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು ಎಂದರು
ಕಾರ್ಮಿಕ ಇಲಾಖೆ ನಿಗದಿ ಪಡಿಸಿದ ಪರಿಷ್ಕೃತ ಕನಿಷ್ಟ ವೇತನ ಸಕಾಲಕ್ಕೆ ನೀಡಬೇಕು ಗ್ರಾಮ ಪಂಚಾಯತಿಯಲ್ಲಿ ಬಾಕಿ ಇರುವ ನೌಕರರನ್ನು ಕೂಡಲೇ ನೇಮಕ ಮಾಡಬೇಕು ಸರ್ಕಾರದ ಆದೇಶದಂತೆ ನೌಕರರ ಸೇವಾ ಪುಸ್ತಕ ತೆರೆಯಬೇಕು ಸರ್ಕಾರ ಆದೇಶಗಳನ್ನು ಜಾರಿ ಮಾಡದ ಪಿಡಿಓಗಳ ಮೇಲೆ ಸೂಕ್ತ ಕ್ರಮ ವಹಿಸಿ ನೌಕರರಿಗೆ ಅತಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಸಿಇಒ ಎಂ.ಆರ್ ರವಿಕುಮಾರ್ ಮಾತನಾಡಿ ಕೂಡಲೇ ಮೂರು ದಿನಗಳಲ್ಲಿ ಸಂಬಳ ನೀಡಲು ಸಂಬಂಧಿಸಿದ ಪಿಡಿಒಗಳಿಗೆ ತಿಳಿಸಲಾಗುತ್ತದೆ ಜೊತೆಗೆ ಸರಕಾರದ ಆದೇಶವನ್ನು ಜಾರಿ ಮಾಡದೇ ಇರುವ ಪಿಡಿಒಗಳ ಮೇಲೆ ಕಾನೂನುಕ್ರಮಗಳನ್ನು ಜಾರಿ ಮಾಡಲಾಗುವುದು ಎಂಬ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್, ಸಂಘಟನಾ ಕಾರ್ಯದರ್ಶಿ ಎಂ.ವಿಜಯಕೃಷ್ಣ,ಮುಖಂಡರಾದ ವೆಂಕಟರಾಮೇಗೌಡ, ಶ್ರೀನಿವಾಸ್, ನಾರಾಯಣಸ್ವಾಮಿ, ಶ್ರೀರಾಮಪ್ಪ, ರಾಮಚಂದ್ರಪ್ಪ ವಹಿಸಿದ್ದರು