ಗ್ರಾ.ಪಂ ನೂತನ ಸದಸ್ಯರಿಗೆ ಸನ್ಮಾನ

ಹರಪನಹಳ್ಳಿ.ಜ.೨; ಕಳೆದ ವರ್ಷ ಗೆಲುವು ಪಡೆದು ಹೊಸ ವರ್ಷದಲ್ಲಿ ಸದಸ್ಯರು ಸನ್ಮಾನ ಸ್ವೀಕರಿಸುವಂತಾಗಿದೆ. ಚುನಾವಣೆಯಲ್ಲಿ ಸೋತವರು ಹತಾಶರಾಗಬೇಕಿಲ್ಲ, ಗೆದ್ದವರೂ ಕೂಡ ನಮ್ಮವರೇ ಎಂದುಕೊಳ್ಳಬೇಕು. ಚುನಾವಣೆಯಲ್ಲಿ ಗೆಲುವು ಕೇವಲ ಒಬ್ಬರಿಗೆ ಸಲ್ಲುವುದಿಲ್ಲ, ಕಾರ್ಯಕರ್ತರ ಪರಿಶ್ರಮ ಅಡಗಿರುತ್ತದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು. 
ಗ್ರಾಮ ಪಂಚಾಯ್ತಿ ಚುನಾವಣೆಗಳು ಕಾರ್ಯಕರ್ತರಿಗೆ ಅಧಿಕಾರ ನೀಡುವ ಸಲುವಾಗಿ ನಡೆಯುತ್ತವೆ. ಪಾರ್ಲಿಮೆಂಟ್‌ಗೆ ಪಂಚಾಯ್ತಿಗಳೇ ಭದ್ರ ಬುನಾದಿಯಾಗಿವೆ. ಗ್ರಾ.ಪಂಗೆ ಕಾಲಿಟ್ಟ ತಕ್ಷಣವೇ ಮೊದಲು ತಮಗೆ ಸೌಲಭ್ಯಗಳನ್ನು ಹಾಕಿಕೊಳ್ಳುವುದ ಬದಲು ನಿಮ್ಮನ್ನು ಗೆಲ್ಲಿಸಿದ ಅರ್ಹರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಅವರ ಋಣ ತೀರಿಸಿ ಎಂದರು. ಕೇಂದ್ರ, ರಾಜ್ಯ, ಜಿ.ಪಂ, ತಾ.ಪಂ, ಪುರಸಭೆಯಲ್ಲಿಯೂ ಕೂಡ ಬಿಜೆಪಿ ಪಕ್ಷ ಆಡಳಿತದಲ್ಲಿದ್ದು, ತಾಲ್ಲೂಕಿನ 28 ಗ್ರಾ.ಪಂಗಳ ಪೈಕಿ ಅತಿ ಹೆಚ್ಚು ಪಂಚಾಯ್ತಿಗಳಲ್ಲಿ ಬಿಜೆಪಿ ಅದಿಕಾರದ ಚುಕ್ಕಾಣಿ ಹಿಡಿಯಲಿದೆ. ಮೀಸಲಾತಿ ಯಾವುದೇ ಬರಲಿ, ಸದಸ್ಯರೆಲ್ಲರೂ ಒಗಟ್ಟು ಪ್ರದರ್ಶಿಸಬೇಕು. ತಪ್ಪು ಕಲ್ಪನೆ ಮೂಲಕ ತಮ್ಮನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ, ಇದಕ್ಕೆ ತಾವು ಮನ್ನಣೆ ನೀಡಬಾರದು. ಬಂಡಾಯವಾಗಿ ಸ್ಪರ್ಧೆ ಮಾಡಿ ವಿಜೇತರಾದವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯ್ತಿಯಲ್ಲಿ ಅದಿಕಾರ ಹಿಡಿಯಬೇಕಿದೆ ಎಮದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೇರವಾಗಿ ಗ್ರಾಮ ಪಂಚಾಯ್ತಿಗಳಿಗೆ ಅನುದಾನ ಹರಿದು ಬರುತ್ತಿದೆ. ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅನುದಾನವನ್ನು ಸದುಪಯೋಗ ಪಡೆದುಕೊಮಡು ಜನರ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು. ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಡಾ.ಮಲ್ಕಪ್ಪ ಅಧಿಕಾರ್ ಮಾತನಾಡಿದರು. ಮುಖಂಡರಾದ ಆರ್.ಲೋಕೇಶ್, ಸಣ್ಣಹಾಲಪ್ಪ, ರಾಘವೇಂದ್ರಶೆಟ್ಟಿ, ಎಂ.ಮಲ್ಲೇಶ್, ಹೆಚ್.ಬಿ.ಬಸವರಾಜಪ್ಪ, ಶಿರಾಗನಹಳ್ಳಿ ವಿಶ್ವನಾಥ, ನೀಲಗುಂದ ಮನೋಜ್, ಕೆ.ಪ್ರಕಾಶ್, ಬಸವರಾಜ್, ಬಾವಿಹಳ್ಳಿ ಉದಯ್, ಯು.ಪಿ.ನಾಗರಾಜ್, ಲತಾ ನಾಗರಾಜ್, ಎಂ.ಕೆ.ಜಾವೀದ್, ಮಹೇಶ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.