ಗ್ರಾ.ಪಂ.ನಿಂದ ದುಡಿಯೋಣ ಬಾ ಕಾರ್ಯಕ್ರಮಕ್ಕೆ ಚಾಲನೆ

ಕೆ.ಆರ್.ಪೇಟೆ:ಏ:04: ಜಲಮೂಲಗಳಂತಿರುವ ಕಲ್ಯಾಣಿಗಳ ಬಗ್ಗೆ ನಿರ್ಲಕ್ಷ ವಹಿಸದೇ ಕಲ್ಯಾಣಿಗಳ ಅಭಿವೃದ್ದಿ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ನರೇಗಾ ಸಹಾಯಕ ನಿರ್ದೇಶಕಿ ಮೇನಕಾದೇವಿ ತಿಳಿಸಿದರು.
ಅವರು ಕಿಕ್ಕೇರಿ ಹೋಬಳಿಯ ಅಂಚೆಬೀರನಹಳ್ಳಿ ಗ್ರಾಮದಲ್ಲಿ ಆನೆಗೊಳ ಗ್ರಾಮ ಪಂಚಾಯಿತಿ ವತಿಯಿಂದ ದುಡಿಯೋಣ ಬಾ ಕಾರ್ಯಕ್ರಮದ ಅಡಿಯಲ್ಲಿ ಜಲಶಕ್ತಿ ಯೋಜನೆಯ ಮೂಲಕ ಕಲ್ಯಾಣಿಯ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಲ್ಯಾಣಿಗಳು ನಮ್ಮ ಪೂರ್ವಜರು ಅಂತರ್ಜಲ ಅಭಿವೃದ್ದಿಗೆ ಮಾಡಿರುವ ಕುರುಹುಗಳಾಗಿದ್ದು ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗಬೇಕಾದುದು ನಮ್ಮ ಕರ್ತವ್ಯವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಕಲ್ಯಾಣಿಗಳು ಇಂದು ಅಳಿವಿನ ಅಂಚಿನಲ್ಲಿದ್ದು ಅವುಗಳನ್ನು ಗುರ್ತಿಸಿ ಸ್ಥಳೀಯ ಜನರುಗಳೇ ಸೇರಿ ಅಭಿವೃದ್ದಿ ಪಡಿಸಬೇಕು, ನರೇಗಾ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗವನ್ನು ಕಲ್ಪಿಸುವುದರೊಂದಿಗೆ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿ ನಗರಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಗಟ್ಟುತ್ತದೆ. ಆದ್ದರಿಂದ ಗ್ರಾಮಗಳ ಜನರು ಉದ್ಯೋಗ ಚೀಟಿ ಮಾಡಿಸುವ ಮೂಲಕ ಆಯಾಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಾನವ ಶ್ರಮವನ್ನು ವ್ಯಯಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಅನುಸೂಯ, ಉಪಾದ್ಯಕ್ಷ ಯೋಗೆಗೌಡ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಯಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.