ಗ್ರಾ.ಪಂ.ನಲ್ಲಿ ಕೋವಿಡ್ ತುರ್ತು ಸಭೆ

ಮರಿಯಮ್ಮನಹಳ್ಳಿ, ಏ.30: ಪಟ್ಟಣಕ್ಕೆ ಸಮೀಪದ ಡಣಾಯಕನಕೆರೆ ಗ್ರಾ.ಪಂ.ನಲ್ಲಿ ಗ್ರಾ.ಪಂ ಅಧ್ಯಕ್ಷೆ ಅಕ್ಕಮಹಾದೇವಿಯವರ ಅಧ್ಯಕ್ಷತೆಯಲ್ಲಿ ಕೋವಿಡ್ ತುರ್ತುಸಭೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಅಕ್ಕಮಹಾದೇವಿ ಅವರು ಕೋವಿಡ್ ಎರಡನೆ ಅಲೆ ಅತಿವೇಗವಾಗಿ ಹರಡುತ್ತಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ದೂರದ ನಗರಗಳಿಂದ ವಾಪಸ್ ಹಳ್ಳಿಗಳಿಗೆ ಬರುವವರ ಬಗ್ಗೆ ಪಂಚಾಯಿತಿಯ ಗಮನಕ್ಕೆ ತರಬೇಕು. ಅಂತವರನ್ನು ಕೋವಿಡ್ ತಪಾಸಣೆ ಮಾಡಿಸಿ ಅವರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಾಕಾಗಿದೆ. ಪಂಚಾಯಿತಿಯ ಸದಸ್ಯರೂ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕಾಗಿದೆ. ಅಲ್ಲದೇ ನರೇಗಾ ಕೂಲಿ ಕಾರ್ಮಿಕರ ಕೆಲಸಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದಂತೆ ಸೂಚಿಸಿದರು.
ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಅಗತ್ಯವಾಗಿದ್ದು ಸದಸ್ಯರೂ ಸಹ ಕಾರ್ಮಿಕರ ಬಳಿಗೆ ಹೋಗಿ ಅವರಲ್ಲಿ ಅರಿವು ಮೂಡಿಸಿ ಸಹಕಾರ ಮಾಡಿ ಎಂದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಸೋಮಪ್ಪ ಉಪ್ಪಾರ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ಚರಂಡಿ ಸ್ವಚ್ಚತೆ, ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿಸುವುದರ ಜೊತೆಗೆ ಬೇಸಿಗೆಯಲ್ಲಿ ಯಾವ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳಲ್ಲಿ ಆಗ್ರಹಿಸಿದರು.
ಗ್ರಾ.ಪಂ.ನ ಪಿ.ಡಿ.ಓ. ಎಂ. ಜಿಲಾನ್ ಸಾಬ್ ಮಾತನಾಡಿ, ಎಲ್ಲಾ ಗ್ರಾಮಗಳಲ್ಲಿ ಚರಂಡಿ ಸ್ವಚ್ಚತೆಗೆ ಮುಂದಾಗುತ್ತೇವೆ. ಎಲ್ಲಾ ಕಡೆಯೂ ಬ್ಲೀಚಿಂಗ್ ಪೌಡರ್ ಸಿಂಪರಣೆಗೆ, ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೆಂಕಟೇಶ್ ಉಪ್ಪಾರ್, ಸದಸ್ಯರಾದ ಹನುಮಂತಪ್ಪ, ಶಶಿಕಲಾ ಗಾಳಿಸ್ವಾಮಿ, ವಸಂತಕುಮಾರಿ, ಅಂಗಡಿ ಜಗದೀಶ, ನಾಗಪ್ಪ ಹರಿಜನ, ಡಿ.ಗುರುರಾಜ, ಹೆಚ್.ರೇಣುಕಾ ಪರಶುರಾಮ್, ಲಕ್ಷ್ಮಿದೇವಿ ಕೆ.ಆನಂದ, ರಮೇಶಪ್ಪ, ಸಾವಿತ್ರಮ್ಮ, ಚಿನ್ನಾಪುರಿ, ಎಲ್.ನೇತ್ರಾ ಸೂರ್ಯಪ್ರಕಾಶ್, ಪಿ.ಸೋಮಪ್ಪ ಸಭೆಯಲ್ಲಿ ಹಾಜರಿದ್ದರು. ಇನ್ನುಳಿದ ಸದಸ್ಯರಾದ ಕೆ.ರೂಪ ರಮೇಶ್, ಎಂ.ಸೋಮಣ್ಣ, ಹರಿಜನ ಜ್ಯೊತಿ ಕಾಳಪ್ಪ, ಎ.ಲಕ್ಷ್ಮಿದೇವಿ ನಾಗರಾಜ ಗೈರು ಹಾಜರಾಗಿದ್ದರು.