ಗ್ರಾ. ಪಂ ಚುನಾವಣೆ ; 06 ಕೇಂದ್ರಗಳಲ್ಲಿ ಮತ ಎಣಿಕೆಗೆ ಸಜ್ಜು- ಮಹಾಂತೇಶ್ ಬೀಳಗಿ

ದಾವಣಗೆರೆ ಡಿ. 29 :ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ 06 ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕಳೆದ ಡಿ. 22 ಹಾಗೂ ಡಿ. 27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ಜರುಗಿದೆ.  ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಗ್ರಾ.ಪಂ.ನ ಎರಡು ಮತಗಟ್ಟೆಗಳಲ್ಲಿ ಡಿ. 29 ರಂದು ಮರು ಮತದಾನ ನಡೆಸಲಾಗಿದೆ. ಜಿಲ್ಲೆಯ ಒಟ್ಟು 187 ಗ್ರಾಮ ಪಂಚಾಯತಿಗಳಿಗೆ ಜರುಗಿದ ಚುನಾವಣೆಯಲ್ಲಿ ಈ ಬಾರಿ ಒಟ್ಟು 374 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  09 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಖಾಲಿ ಉಳಿದಿವೆ.  ಒಟ್ಟು 2200 ಸದಸ್ಯ ಸ್ಥಾನಗಳಿಗೆ 1158 ಮತಗಟ್ಟೆಗಳಲ್ಲಿ ಜರುಗಿದ ಚುನಾವಣೆಯಲ್ಲಿ ಒಟ್ಟಾರೆ ಶೇ. 85.79 ರಷ್ಟು ಮತದಾನವಾಗಿದ್ದು, ಹೊನ್ನಾಳಿ ತಾಲ್ಲೂಕು- ಶೇ. 86.31, ದಾವಣಗೆರೆ- ಶೇ. 86.23, ಜಗಳೂರು-ಶೇ. 85.08, ಚನ್ನಗಿರಿ- ಶೇ. 84.56, ನ್ಯಾಮತಿ-87.49 ಹಾಗೂ ಹರಿಹರ ತಾಲ್ಲೂಕಿನಲ್ಲಿ ಶೇ. 87.15 ರಷ್ಟು ಮತದಾನವಾಗಿದೆ.  ಇದೀಗ ಡಿ. 30 ರಂದು ಮತಗಳ ಎಣಿಕೆ ಕಾರ್ಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮತ ಎಣಿಕೆ ಕೇಂದ್ರಗಳು :
ದಾವಣಗೆರೆಯ ಮೋತಿ ವೀರಪ್ಪ ಪ್ರೌಢಶಲೆ ಮತ್ತು ಪ.ಪೂ. ಕಾಲೇಜು.  ಜಗಳೂರಿನ ಸರ್ಕಾರಿ ಜೂನಿಯರ್ ಕಾಲೇಜು.  ಹೊನ್ನಾಳಿಯ ಗಂಗಮ್ಮ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ ಹಿರೇಕಲ್ಮಠ.  ನ್ಯಾಮತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್.  ಹರಿಹರದ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆ ಹಾಗೂ ಚನ್ನಗಿರಿಯ ಸರ್ಕಾರಿ ಪ.ಪೂ. ಕಾಲೇಜು ಇಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
1095 ಸಿಬ್ಬಂದಿ, 331 ಟೇಬಲ್‍ಗಳು :
ಮತಗಳ ಎಣಿಕಾ ಕಾರ್ಯ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಅಗತ್ಯ ಸಿಬ್ಬಂದಿಗಳಿಗೆ ಮಾಸ್ಟರ್ ಟ್ರೇನರ್‍ಗಳ ಮೂಲಕ ಮತ ಎಣಿಕೆ ಸಿಬ್ಬಂದಿಗಳಿಗೆ ಎರಡು ಬಾರಿ ತರಬೇತಿ ನೀಡಿ, ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1158 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆ ಒಟ್ಟು 06 ತಾಲ್ಲೂಕು ಕೇಂದ್ರಗಳಲ್ಲಿ ಜರುಗಲಿದೆ.  ಒಟ್ಟು 331 ಟೇಬಲ್‍ಗಳನ್ನು ಮತಗಳ ಎಣಿಕೆಗೆ ವ್ಯವಸ್ಥೆಗೊಳಿಸಿದ್ದು, 331 ಎಣಿಕಾ ಮೇಲ್ವಿಚಾರಕರು, ಹೆಚ್ಚುವರಿ 32 ಸೇರಿದಂತೆ ಒಟ್ಟು 363 ಮೇಲ್ವಿಚಾರಕರನ್ನು ನೇಮಿಸಿದೆ.  ಅಲ್ಲದೆ 666 ಎಣಿಕಾ ಸಹಾಯಕರು ಹಾಗೂ ಹೆಚ್ಚುವರಿ 66 ಸೇರಿದಂತೆ ಒಟ್ಟು 732 ಎಣಿಕಾ ಸಹಕಾಕರನ್ನು ನಿಯೋಜಿಸಿದ್ದು, ಒಟ್ಟಾರೆ 1095 ಸಿಬ್ಬಂದಿಗಳನ್ನು ಮತ ಎಣಿಕಾ ಕಾರ್ಯಕ್ಕೆ ನೇಮಿಸಲಾಗಿದೆ.
ತಾಲ್ಲೂಕುವಾರು ವಿವರ :
ಹೊನ್ನಾಳಿ ತಾಲ್ಲೂಕಿನಲ್ಲಿ 147 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 41 ಟೇಬಲ್‍ಗಳು, 45 ಮೇಲ್ವಿಚಾರಕರು, 90 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 135 ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ದಾವಣಗೆರೆ ತಾಲ್ಲೂಕಿನಲ್ಲಿ 253 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 73 ಟೇಬಲ್‍ಗಳು, 80 ಮೇಲ್ವಿಚಾರಕರು, 161 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 241 ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಜಗಳೂರು ತಾಲ್ಲೂಕಿನಲ್ಲಿ 172 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 51 ಟೇಬಲ್‍ಗಳು, 56 ಮೇಲ್ವಿಚಾರಕರು, 112 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 168 ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಚನ್ನಗಿರಿ ತಾಲ್ಲೂಕಿನಲ್ಲಿ 368 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತ ಎಣಿಕೆಗೆ 100 ಟೇಬಲ್‍ಗಳು, 110 ಮೇಲ್ವಿಚಾರಕರು, 220 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 330 ಸಿಬ್ಬಂದಿ ನೇಮಿಸಲಾಗಿದೆ.  ಹರಿಹರ ತಾಲ್ಲೂಕಿನಲ್ಲಿ 151 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 42 ಟೇಬಲ್‍ಗಳು, 46 ಮೇಲ್ವಿಚಾರಕರು, 92 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 138 ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ನ್ಯಾಮತಿ ತಾಲ್ಲೂಕಿನಲ್ಲಿ 93 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 24 ಟೇಬಲ್‍ಗಳು, 26 ಮೇಲ್ವಿಚಾರಕರು, 57 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 83 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮಾನ ಮತಗಳು ಬಂದಲ್ಲಿ ಚೀಟಿ ಮೂಲಕ ಆಯ್ಕೆ : ಮತಗಳ ಎಣಿಕೆ ಮುಕ್ತಾಯ ಬಳಿಕ ಅಭ್ಯರ್ಥಿಗಳ ನಡುವೆ ಸಮಾನ ಮತಗಳು ಇರುವುದು ಕಂಡುಬಂದಲ್ಲಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ) ನಿಯಮ 1993 (73) ಅನ್ವಯ ಚುನಾವಣಾಧಿಕಾರಿಯು ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಆಯ್ಕೆಯನ್ನು ನಿರ್ಣಯಿಸುವರು.  ಒಂದು ವೇಳೆ ಮತಪತ್ರದಲ್ಲಿ ಗುರುತು ಮಾಡದೇ ಇರುವುದು, ಖಾಲಿ ಜಾಗದ ಮೇಲೆ ಗುರುತು ಮಾಡಿದಲ್ಲಿ, ಆಯ್ಕೆ ಮಾಡಬೇಕಾಗಿರುವ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಲ್ಲಿ, ಮತದಾರರನ್ನು ಗುರುತಿಸಿದ್ದಲ್ಲಿ, ಮತಪತ್ರವನ್ನು ವಿರೂಪಗೊಳಿಸಿದ್ದಲ್ಲಿ, ಮತಪತ್ರ ನೈಜವಾದುದಲ್ಲ ಎಂದು ಕಂಡುಬಂದಲ್ಲಿ ಅಂತಹ ಮತಪತ್ರವನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.