ಗ್ರಾ.ಪಂ. ಚುನಾವಣೆ : ೧೧೧೭ ಪೊಲೀಸ್ ಸಿಬ್ಬಂದಿ ಭಾರೀ ಬಂದೋಬಸ್ತ್

ಮೂರು ತಾಲೂಕು : ೧೧೩ ಸೂಕ್ಷ್ಮ – ೫೨೬ ಸಾಮಾನ್ಯ ಮತಗಟ್ಟೆ
ರಾಯಚೂರು.ಡಿ.೨೬- ಗ್ರಾಮ ಪಂಚಾಯತ ಎರಡನೇ ಮತ್ತು ಕೊನೆ ಹಂತದ ಚುನಾವಣೆಯಲ್ಲಿ ೩ ಗ್ರಾ.ಪಂ.ಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ನಾಳೆ ೭೬ ಗ್ರಾ.ಪಂ.ಗಳಿಗೆ ನಡೆಯುವ ಚುನಾವಣೆಗೆ ಜಿಲ್ಲಾ ಪೊಲೀಸ್ ಭಾರೀ ಬಂದೋಬಸ್ತ್ ವ್ಯವಸ್ಥೆಗೊಳಿಸಿದೆ.
ದೇವದುರ್ಗ ತಾಲೂಕಿನ ಜುಟಮರಡಿ ಪೊಲೀಸ್ ಹಲ್ಲೆ ಘಟನೆಯಂತಹ ಪ್ರಕರಣಗಳ ಹಿನ್ನೆಲೆಯಲ್ಲಿ ನಾಳಿನ ಚುನಾವಣೆಯಲ್ಲಿ ಬಂದೋಬಸ್ತ್ ಮತ್ತಷ್ಟು ತೀವ್ರಗೊಳಿಸಲಾಗಿದೆ. ೭೬ ಗ್ರಾ.ಪಂ.ಗಳ ಒಟ್ಟು ೧೨೬೯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ೭೩೬ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು ೧೧೩ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಹಿಂದಿನ ಚುನಾವಣೆಗಳಲ್ಲಿ ಈ ಮತಗಟ್ಟೆಗಳಲ್ಲಿ ನಡೆದ ಗಲಭೆ ಇತ್ಯಾದಿಗಳನ್ನು ಗಮನಿಸಿ, ಜಿಲ್ಲಾ ಪೊಲೀಸ್ ಇಲಾಖೆ ನಿರ್ಧರಿಸಿದೆ.
೫೨೬ ಮತಗಟ್ಟೆಗಳು ಸಾಮಾನ್ಯ ಎಂದು ಗುರುತಿಸಲಾಗಿದೆ. ಈ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದ ಆರಂಭಗೊಳ್ಳುವ ಚುನಾವಣೆ ಸಂಜೆವರಗೂ ನಡೆಯಲಿವೆ. ಮತದಾನದ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಮತದಾನಕ್ಕೆ ಯಾವುದೇ ಅಡ್ಡಿ, ಆತಂಕಗಳಿಲ್ಲದಂತೆ ನಿರ್ವಹಿಸಲು ಒಟ್ಟು ೧೧೧೭ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಜಿಲ್ಲೆಯ ೫೨ ಪೊಲೀಸ್ ಅಧಿಕಾರಿ ಮತ್ತು ೯೮೧ ಪೊಲೀಸ್ ಸಿಬ್ಬಂದಿ ಹಾಗೂ ೮೪ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿರುತ್ತದೆ.
ಕಾನೂನು ಸುವ್ಯವಸ್ಥೆ ಸಂರಕ್ಷಣೆಗೆ ೩೭ ಮೊಬೈಲ್ ಸೆಕ್ಟರ್ ೧೩ ಸೂಪರ್‌ವೈಸರ್ ಸೆಕ್ಟರ್‌ಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ೪ ಕೆಎಸ್‌ಆರ್‌ಪಿ, ೯ ಡಿಆರ್ ತುಕಡಿಯ ತುರ್ತು ಕಾರ್ಯಪಡೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಳ ಬರುವ ಮತ್ತು ಹೊರ ಹೋಗುವ ವಾಹನಗಳ ತಪಾಸಣೆಗೆ ೮ ಚೆಕ್‌ಪೋಸ್ಟ್ ನಿಯುಕ್ತಿಗೊಳಿಸಲಾಗಿದೆ. ಎಲ್ಲಾ ರೀತಿಯ ಚುನಾವಣೆ ಅಕ್ರಮ ಮತ್ತು ಗಲಭೆ ತಡೆಯುವ ಉದ್ದೇಶದಿಂದ ಸರ್ಪಗಾವಲು ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಂ ಪ್ರಕಾಶ ಅಮ್ರಿತ್ ಅವರು ತಿಳಿಸಿದ್ದಾರೆ.