ಗ್ರಾ.ಪಂ. ಚುನಾವಣೆ : ಮಸ್ಟರಿಂಗ್ ಕಾರ್ಯ ಗೊಂದಲ

ಅಧಿಕಾರಿಗಳಿಗೆ ತರಾಟೆ – ಕೋವಿಡ್ ನಿಯಮ ಉಲ್ಲಂಘನೆ
ರಾಯಚೂರು.ಡಿ.೨೧- ಜಿಲ್ಲೆಯ ಮೊದಲ ಹಂತದ ನಾಲ್ಕು ತಾಲೂಕುಗಳ ಗ್ರಾ.ಪಂ. ಚುನಾವಣೆಗೆ ಇಂದು ಸಿಬ್ಬಂದಿ ಮತ್ತು ಮತಪೆಟ್ಟಿಗೆಗಳೊಂದಿಗೆ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿ ಹಂಚಿಕೆ ಕಾರ್ಯ ಆಯಾ ತಾಲೂಕಿನ ನಿಗದಿತ ಕೇಂದ್ರಗಳಲ್ಲಿ ನಿರ್ವಹಿಸಲಾಯಿತು. ಈ ಭಾಗವಾಗಿ ರಾಯಚೂರು ತಾಲೂಕಿನ ೩೨ ಗ್ರಾ.ಪಂ.ಗಳ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳಿಗೆ ನಗರದ ಎಲ್‌ವಿಡಿ ಕಾಲೇಜಿನಲ್ಲಿ ಜವಾಬ್ದಾರಿ ಹಂಚಿಕೆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಮತ ಯಂತ್ರಗಳ ಮೇಲೆ ಚುನಾವಣೆ ನಿರ್ವಹಿಸಿದ ಅಧಿಕಾರಿಗಳು ಇಂದು ಮತ ಪತ್ರಗಳ ಮೂಲಕ ಚುನಾವಣೆ ನಿರ್ವಹಸುವ ತರಬೇತಿಯನ್ನು ನೀಡಿ ನಾಳಿನ ಚುನಾವಣೆ ವ್ಯವಸ್ಥಿತವಾಗಿ ನಿರ್ವಹಿಸಲು ಸೂಚಿಸಲಾಯಿತು. ಚುನಾವಣಾ ಜವಾಬ್ದಾರಿ ನೀಡಿದ ಶಿಕ್ಷಕರು ಮತ್ತಿತರ ಅಧಿಕಾರಿಗಳು ಭಾರೀ ಸಂಖ್ಯೆಯಲ್ಲಿ ಎಲ್‌ವಿಡಿ ಕಾಲೇಜು ಮೈದಾನದಲ್ಲಿ ಸೇರಿದ್ದರು. ಸಾರಿಗೆ ಮತ್ತು ವಿವಿಧ ಶಿಕ್ಷಣ ಸಂಸ್ಥೆ ವಾಹನಗಳನ್ನು ಸಿಬ್ಬಂದಿಯ ಸಾಗಾಣಿಕೆಗೆ ಬಳಸಲಾಯಿತು. ಮಕ್ಕಳು ಮರಿಯೊಂದಿಗೆ ಕೆಲ ಶಿಕ್ಷಕರು ಮತಗಟ್ಟೆಗಳಿಗೆ ತೆರಳಲು ಸಿದ್ಧರಾಗಿ ಬಂದಿರುವುದು ವಿಶೇಷವಾಗಿತ್ತು.
ಎಲ್‌ವಿಡಿ ಕಾಲೇಜಿನಲ್ಲಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದರಿಂದ ಬಹಳ ಸಮಯದವರೆಗೂ ಕಿರಿಯ ಅಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ಹುಡುಕುವುದರಲ್ಲಿಯೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚುನಾವಣೆಗೆ ಸಂಬಂಧಿಸಿ ನಿಯುಕ್ತಿಗೊಂಡ ಅಧಿಕಾರಿಗಳ ದೂರವಾಣಿ ಸಂಖ್ಯೆ ಸರಿಯಾಗಿ ಲಭ್ಯವಾಗಿರುವುದರಿಂದ ಮಾಹಿತಿಯ ಕೊರತೆ ಚುನಾವಣೆ ಜವಾಬ್ದಾರಿ ಹಂಚಿಕೆ ಮೇಲೆ ಪರಿಣಾಮ ಬೀರಿತ್ತು.
ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಚುನಾವಣಾ ಅಧಿಕಾರಿಗಳಿಗೆ ತಮ್ಮದೇ ಇಲಾಖೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಚುನಾವಣಾ ಜವಾಬ್ದಾರಿ ಸಭೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸ್ಪಷ್ಟವಾಗಿ ಕಂಡು ಬಂದಿತ್ತು.
ಕೆಲ ಮಹಿಳೆಯರು ಇನ್ನಿತರ ಕೆಲ ಸಿಬ್ಬಂದಿಗಳು ಅನಾರೋಗ್ಯ ಮತ್ತು ಚಿಕ್ಕಮಕ್ಕಳೊಂದಿಗೆ ಸ್ಥಳಕ್ಕೆ ಆಗಮಿಸಿ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಕೋರಿದ್ದರು. ಸಮರ್ಪಕ ದಾಖಲೆ ಪರಿಶೀಲಿಸಿ ಕೆಲ ಅಧಿಕಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಇನ್ನೂ ಕೆಲವರಿಗೆ ಪರಸ್ಪರ ಹತ್ತಿರ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಯಿತು. ಎಲ್ಲಾ ಸಿಬ್ಬಂದಿಯನ್ನು ಇಲ್ಲಿಂದ ಸ್ಥಳಾಂತರಿಸಲು ೮೨ ವಾಹನಗಳ ಮೂಲಕ ಅವರನ್ನು ಆಯಾ ಗ್ರಾ.ಪಂ.ಗಳ ಚುನಾವಣಾ ಸ್ಥಳಗಳಿಗೆ ರವಾನೆ ಮಾಡಲಾಯಿತು.
ಮಸ್ಟರಿಂಗ್ ಈ ಚಟುವಟಿಕೆಯೂ ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯೆ ವಹಿಸಿದ್ದರಿಂದ ಭಾರೀ ಗೊಂದಲಗಳು ಅಧಿಕಾರಿ ಮತ್ತು ಚುನಾವಣಾಧಿಕಾರಿಯನ್ನು ಕೆಲ ಸಮಯ ತೊಂದರೆಗೆ ಗುರಿ ಮಾಡಿತ್ತು. ಸ್ಥಳಕ್ಕೆ ಧಾವಿಸಿದ ಸ್ಥಾನಿಕ ಜಿಲ್ಲಾಧಿಕಾರಿ ದುರ್ಗೇಶ ಅವರು ಸರಿಯಾದ ಸಮಯಕ್ಕೆ ಎಲ್‌ವಿಡಿ ಕಾಲೇಜಿಗೆ ಬಾರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.