ಗ್ರಾ.ಪಂ. ಚುನಾವಣೆ ಮತ ಎಣಿಕೆ: ಜಿಲ್ಲೆಯಾದ್ಯಂತ 11 ಮತ ಎಣಿಕೆ ಕೇಂದ್ರಗಳ ಸ್ಥಾಪನೆ

ಕಲಬುರಗಿ.ಡಿ.29:ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯು ಕಲಬುರಗಿ ಜಿಲ್ಲೆಯ 11 ತಾಲೂಕು ಕೇಂದ್ರಗಳಲ್ಲಿ ಡಿ. 30 ಬುಧವಾರದಂದು ಬೆಳಗ್ಗೆ 8 ಗಂಟೆಯಿಂದ ಜರುಗಲಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
11 ತಾಲೂಕಿನ ಚುನಾವಣೆ ನಡೆದ 1,427 ಕ್ಷೇತ್ರಗಳ ಮತ ಎಣಿಕೆಗಾಗಿ ಒಟ್ಟಾರೆ 530 ಟೇಬಲ್ ಹಾಕಲಾಗಿದ್ದು, ಪ್ರತಿ ಟೇಬಲ್‍ಗಳಿಗೆ ಓರ್ವ ಮೇಲ್ವಿಚಾರಕರು ಹಾಗೂ ಇಬ್ಬರು ಎಣಿಕೆ ಸಹಾಯಕರನ್ನೊಳಗೊಂಡಂತೆ 530 ಎಣಿಕೆ ತಂಡಗಳನ್ನು ನಿಯೋಜಿಸಲಾಗಿದೆ.
ಮತ ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರ್‍ಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಗ್ಲೌಸ್‍ಗಳ ಧರಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅಭ್ಯರ್ಥಿಗಳು ಪರಸ್ಪರ ಮುಟ್ಟದೇ ಶುಭಾಶಯವನ್ನು ತಿಳಿಸಬಹುದಾಗಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿ ಅಥವಾ ಅವರ ಓರ್ವ ಏಜೆಂಟ್‍ಗೆ ಮಾತ್ರ ಪ್ರವೇಶ ಇರುತ್ತದೆ. ಕೋವಿಡ್-19 ಹಿನ್ನೆಲೆಯಲ್ಲಿ ಮತಎಣಿಕೆ ಕೇಂದ್ರಗಳ ಹೊರಭಾಗದಲ್ಲಿ ಜನರು ಗುಂಪಾಗಿ ಒಂದೇ ಕಡೆ ಸೇರುವುದನ್ನು ನಿಷೇಧಿಸಲಾಗಿದೆ. ಮತಎಣಿಕೆ ಕೇಂದ್ರದೊಳಗೆ ಪ್ರವೇಶಿಸುವ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿ ಹಾಗೂ ಓರ್ವ ಏಜೆಂಟ್‍ರಿಗೆ ಥರ್ಮಲ್ ಸ್ಕ್ಯಾನ್ ಮಾಡಲು ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್: ಮತ ಎಣಿಕೆ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಓರ್ವ ಎಸ್.ಪಿ., ಓರ್ವ ಹೆಚ್ಚುವರಿ ಎಸ್.ಪಿ., 8 ಜನ ಡಿ.ಎಸ್.ಪಿ., 16 ಜನ ಸಿಪಿಐ., 39 ಜನ ಪಿ.ಎಸ್.ಐ., 97 ಜನ ಎ.ಎಸ್.ಐ., 628 ಜನ ಪೊಲೀಸ್ ಪೇದೆ/ಮುಖ್ಯ ಪೇದೆ, 73 ಜನ ಹೋಂಗಾರ್ಡ್, ಕೆ.ಎಸ್.ಆರ್.ಪಿ. 4 ತುಕಡಿ ಹಾಗೂ ಡಿ.ಎ.ಆರ್. 11 ತುಕಡಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮತ ಎಣಿಕೆ ನಡೆಯುವ ಸ್ಥಳಗಳ ವಿವರ ಇಂತಿದೆ. ಕಲಬುರಗಿ ತಾಲೂಕು: ಕಲಬುರಗಿಯ ಸರ್ಕಾರಿ ಪಾಲಿಟೆಕ್ನಕ್ ಕಾಲೇಜು. ಆಳಂದ ತಾಲೂಕು: ಆಳಂದ (ಬಾಲಕರ) ಸರ್ಕಾರಿ ಪದವಿಪೂರ್ವ ಕಾಲೇಜು. ಅಫಜಲಪುರ ತಾಲೂಕು: ಅಫಜಲಪುರದ ಕಲ್ಲೂರ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು. ಜೇವರ್ಗಿ ತಾಲೂಕು: ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಚಿತ್ತಾಪುರ ತಾಲೂಕು: ಚಿತ್ತಾಪುರ ರಾವೂರ ರಸ್ತೆಯಲ್ಲಿರುವ ಶ್ರೀ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಸೇಡಂ ತಾಲೂಕು: ಸೇಡಂ ಉಡಗಿ ರಸ್ತೆಯಲ್ಲಿರುವ ನೃಪತುಂಗ ಡಿಗ್ರಿ ಕಾಲೇಜು. ಚಿಂಚೋಳಿ ತಾಲೂಕು: ಚಿಂಚೋಳಿಯ ಚಂದಾಪುರದ ಶ್ರೀಮತಿ ಚನ್ನಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ವಿದ್ಯಾಲಯ. ಕಮಲಾಪುರ ತಾಲೂಕು: ಕಮಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಕಾಳಗಿ ತಾಲೂಕು: ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಹಾಬಾದ ತಾಲೂಕು: ಶಹಾಬಾದ ಗಂಗಮ್ಮ ಎಸ್. ಮರಗೋಳ ಕನ್ಯಾ ಪ್ರೌಢಶಾಲೆ ಹಾಗೂ ಯಡ್ರಾಮಿ ತಾಲೂಕು: ಯಡ್ರಾಮಿಯ ಕರ್ನಾಟಕ ಪಬ್ಲಿಕ್ ಶಾಲೆ.