ಗ್ರಾ.ಪಂ.ಚುನಾವಣೆ : ಮಂದಗತಿ ಮತ ಎಣಿಕೆ

ದೇವದುರ್ಗ.ಡಿ.೩೦- ದೇವದುರ್ಗ ತಾಲೂಕಿನ ಗ್ರಾ.ಪಂ. ಮತ ಎಣಿಕೆ ಪ್ರಕ್ರಿಯೆಯೂ ಮಂದಗತಿಯಲ್ಲಿ ಸಾಗಿದ್ದು, ೧೨ ಗಂಟೆ ಕಳೆದರೂ, ಒಂದು ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳದಿರುವುದು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಗ್ರಾಮ ಪಂಚಾಯತ ವಾರ್ಡಗಳ ಮತ ಸಂಖ್ಯೆ ಕಡಿಮೆ ಇರುವುದರಿಂದ ಪ್ರತಿ ಸುತ್ತಿನಲ್ಲೂ ಫಲಿತಾಂಶ ಪ್ರಕಟಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಜನ ಈಗ ನಿರಾಸೆಗೆ ಗುರಿಯಾಗಿದ್ದಾರೆ. ಮುಂಜಾನೆ ೮ ಗಂಟೆಯಿಂದ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ, ೧೨ ಗಂಟೆಯಾದರೂ ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳದಿರುವುದು ಬೇಸರಕ್ಕೆ ಕಾರಣವಾಗಿತ್ತು. ಈ ಕುರಿತು ಕೆಲ ಅಭ್ಯರ್ಥಿಗಳು ಆಕ್ಷೇಪವೆತ್ತಿದ ಘಟನೆಗಳು ನಡೆದಿವೆ. ಮೊದಲ ಹಂತದಲ್ಲಿ ೬೬ ವಾರ್ಡ್ ಮತ ಎಣಿಕೆ ಕಾರ್ಯ ನಡೆದಿದ್ದು, ಇನ್ನೂವರೆಗೂ ಫಲಿತಾಂಶ ಬಾರದಿರುವುದು ಗೊಂದಲಕ್ಕೆ ಕಾರಣವಾಯಿತು.
ತ್ವರಿತ ಗತಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಬೇಕೆಂಬ ಉದ್ದೇಶದಿಂದ ಅಧಿಕಾರಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ, ವಾಸ್ತವಿಕವಾಗಿ ಮತ ಎಣಿಕೆ ಪ್ರಕ್ರಿಯೆ ಮಂದಗತಿಯಲ್ಲಿ ನಡೆದಿರುವುದು ಪೂರ್ಣ ಮತ ಎಣಿಕೆ ಮುಗಿಯಲು ರಾತ್ರಿಯಾಗುವುದೇ ಎನ್ನುವ ಆತಂಕ ಅಭ್ಯರ್ಥಿ ಮತ್ತು ಬೆಂಬಲಿಗರಲ್ಲಿ ಮೂಡುವಂತೆ ಮಾಡಿದೆ.