ಗ್ರಾ. ಪಂ ಚುನಾವಣೆ ಬಿಜೆಪಿಗೆ ಪ್ರಥಮ ಸ್ಥಾನ

ಕೆ.ಆರ್.ಪೇಟೆ.ಡಿ.04: ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ತಿಳಿಸಿದರು.
ತಾಲೂಕಿನಲ್ಲಿ ಒಟ್ಟು 587 ಗ್ರಾಮ ಪಂಚಾಯತಿ ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ ಸದಸ್ಯರು 258ಕ್ಕೂ ಅಧಿಕ ಸದಸ್ಯರು ಆಯ್ಕೆಯಾಗಿದ್ದು ಪ್ರಥಮ ಸ್ಥಾನದಲ್ಲಿದೆ ಜೆಡಿಎಸ್ ಪಕ್ಷದ ಬೆಂಬಲಿಗರು 218 ಸದಸ್ಯರು ಆಯ್ಕೆಯಾಗಿದ್ದು ದ್ವಿತೀಯ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ಬೆಂಬಲಿಗರು 100ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪರಮೇಶ್ ಸ್ಪಷ್ಟಪಡಿಸಿದರು.
ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ ಮಾತನಾಡಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಾನಕೀರಾಂ ಮತ್ತು ಜೆಡಿಎಸ್ ಮುಖಂಡರ ಆರೋಪಗಳು ಸತ್ಯಕ್ಕೆ ದೂರವಾಗಿವೆ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಜೆಡಿಎಸ್ ಅಸ್ತಿತ್ವವು ದಿನದಿಂದ ದಿನಕ್ಕೆ ತಾಲ್ಲೂಕಿನಲ್ಲಿ ಕುಸಿಯುತ್ತಿರುವುದರಿಂದ ಹತಾಶೆಯಿಂದ ಜೆಡಿಎಸ್ ಮುಖಂಡರು ಸಚಿವ ನಾರಾಯಣಗೌಡರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಭದ್ರಕೋಟೆಯು ಕುಸಿಯುತ್ತಿದೆ. ಬಿಜೆಪಿ ಶಕ್ತಿಯು ವೃದ್ಧಿಸುತ್ತಿರುವುದನ್ನು ಸಹಿಸದೇ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿರುವುದು ವಾಸ್ತವ ಸತ್ಯವಾಗಿದೆ ಎಂದು ದಯಾನಂದ ಹೇಳಿದರು.
ಕಾಂಗ್ರೆಸ್ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಗ್ರಾಮ ಪಂಚಾಯತಿ ಚುನಾವಣೆಯನ್ನು ಎದುರಿಸಿರುವ ಜೆಡಿಎಸ್ ಪಕ್ಷದ ಮುಖಂಡರಿಗೆ ನೈತಿಕತೆಯಿಲ್ಲ ಎಂದು ಜೆಡಿಎಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಮತ್ತು ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್ ಬಿಜೆಪಿ ತಾಲ್ಲೂಕಿನಲ್ಲಿ ಸಚಿವ ನಾರಾಯಣಗೌಡರ ನೇತೃತ್ವದಲ್ಲಿ ಸದೃಡವಾಗಿ ಬೆಳೆಯುತ್ತಿದೆ. ತಾಲ್ಲೂಕಿನ ಅಭಿವೃದ್ಧಿಗಾಗಿ ಪ್ರಜ್ಞಾವಂತ ಮತದಾರರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಆಶೀರ್ವದಿಸಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ನಂತರ ಜೆಡಿಎಸ್ ಪಕ್ಷದ ನಿಜವಾದ ಬಣ್ಣವು ಏನೆಂಬುದು ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ನಗರ ಘಟಕದ ಅಧ್ಯಕ್ಷೆ ಚಂದ್ರಕಲಾ, ರೈತಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿ ನಾಗರಾಜು,ತಾ.ಬಿಜೆಪಿ ಉಪಾಧ್ಯಕ್ಷರಾದ ಕೆ.ಎಸ್.ಸತೀಶ್, ಭಾರತಿಪುರ ಪುಟ್ಟಣ್ಣ, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಬಿಜೆಪಿ ಮುಖಂಡರಾದ ಜಯರಾಮೇಗೌಡ, ಹರಿಹರಪುರ ಹರೀಶ್, ಹೊಸಹೊಳಲು ರಾಜು ಮತ್ತಿತರರು ಉಪಸ್ಥಿತರಿದ್ದರು.