ಗ್ರಾ.ಪಂ ಚುನಾವಣೆ : ಪಾರದರ್ಶಕ ನಿಷ್ಪಕ್ಷಪಾತ ಕಾರ್ಯ ನಿರ್ವಹಣೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸೂಚನೆ

ಚಾಮರಾಜನಗರ, ನ.20- ಮುಂಬರುವ ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯವನ್ನು ಜಿಲ್ಲೆಯಲ್ಲಿ ಪಾರದರ್ಶಕ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಧಿಕಾರಿಗಳು ಸನ್ನದ್ದರಾಗಬೇಕಿದ್ದು ಅಗತ್ಯ ಪೂರ್ವ ಸಿದ್ದತಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣಾ ಸಂಬಂಧ ಪೂರ್ವ ಸಿದ್ದತಾ ಕ್ರಮಗಳ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಹಿನ್ನಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚುನಾವಣಾ ಆಯೋಗವು ಪ್ರಮಾಣಿತ ಕಾರ್ಯನಿರ್ವಹಣಾ ಪದ್ದತಿ (ಎಸ್.ಒ.ಪಿ) ರಚಿಸಿದೆ. ಇದರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಚುನಾವಣೆ ಪ್ರತೀ ಹಂತದಲ್ಲಿ ಪಾ¯ನೆ ಮಾಡಬೇಕು. ಚುನಾವಣಾ ತರಬೇತಿ, ಕಾರ್ಯನಿರ್ವಹಣೆ, ಚುನಾವಣಾ ಪ್ರಚಾರ, ಮಸ್ಟರಿಂಗ್, ಡಿ ಮಸ್ಟರಿಂಗ್, ಮತದಾನ, ಎಣಿಕಾ ಕೇಂದ್ರ ಸೇರಿದಂತೆ ಹಲವಾರು ಹಂತಗಳಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಚುನಾವಣಾ ಕೆಲಸವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಚುನಾವಣೆ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ. ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು, ಚುನಾವಣಾ ಕೆಲಸಗಳಿಗಾಗಿ ನೀಡಲಾಗುವ ನಿರ್ದೇಶನ, ಸೂಚನೆಗಳನ್ನು ಹೊಣೆಗಾರಿಕೆಯಿಂದ ಅನುಸರಿಸಬೇಕು. ಇಲ್ಲವಾದಲ್ಲಿ ಗಂಭೀರ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಟ್ಟು 129 ಗ್ರಾಮ ಪಂಚಾಯಿತಿಗಳ ಚುನಾವಣೆಗೆ 839 ಮೂಲ ಮತಗಟ್ಟೆಗಳೊಂದಿಗೆ ಹೆಚ್ಚುವರಿಯಾಗಿ 207 ಮತಗಟ್ಟೆಗಳೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1046 ಮತಗಟ್ಟೆಯನ್ನು ಸ್ಥಾಪಿಸಲಾಗುತ್ತದೆ. ಕೋವಿಡ್ 19 ಹಿನ್ನಲೆಯಲ್ಲಿ ಭೌತಿಕ ಅಂತರ ಕಾಪಾಡಬೇಕಿರುವ ಕಾರಣದಿಂದ 207 ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿರುವ ಮತಗಟ್ಟೆಗಳಿಗೆ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆಯಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಬೇಕು. ಮತಗಟ್ಟೆಯಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ, ಇತರೆ ಅಗತ್ಯ ಸೌಕರ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಂಗಳನ್ನು ತೆರೆಯಬೇಕು. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಪೊಲೀಸ್ ಇಲಾಖೆ ಬಂದೋ ಬಸ್ತ್‍ಗೆ ತಯಾರಿ ಮಾಡಿಕೊಳ್ಳಬೇಕು. ನಿರ್ಭೀತಿಯಿಂದ ಚುನಾವಣೆ ನಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆಗೆ ಅವಕಾಶವಾಗದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಂಟ್ರೋಲ್ ರೂಂ ಸ್ಥಾಪನೆ ಸಿಬ್ಬಂದಿ ನಿಯೋಜನೆಗೆ ಮುಂದಾಗಬೇಕು ಎಂದರು.
ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಎರಡನೇ ಹಂತದ ಚುನಾವಣಾ ಕುರಿತ ತರಬೇತಿ ನೀಡಬೇಕು. ಮಸ್ಟರಿಂಗ್ ಡಿ ಮಸ್ಟರಿಂಗ್ ಕೇಂದ್ರಗಳು, ಮತ ಎಣಿಕೆ ಕೇಂದ್ರಗಳು, ಮತಗಟ್ಟೆಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಜ್, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುಕೊಳ್ಳುವಿಕೆ ಯಂತಹ ಪ್ರಮುಖ ಜವಾಬ್ದಾರಿಗಳೂ ಸೇರಿದಂತೆ ಇತರೆ ಅಗತ್ಯ ಸಿದ್ದತೆಗಳನ್ನು ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಡಿವೈಎಸ್‍ಪಿ ಪ್ರಿಯದರ್ಶಿನಿ, ಜಿಲ್ಲಾ ಲಸಿಕಾ ಅಧಿಕಾರಿ ವಿಶ್ವೇಶ್ವರಯ್ಯ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧರಣೇಶ್, ತಹಶೀಲ್ದಾರರಾದ ನಂಜುಂಡಯ್ಯ, ಸುದರ್ಶನ್, ಕೆ. ಕುನಾಲ್, ಚಿದಾನಂದ ಗುರುಸ್ವಾಮಿ, ಚುನಾವಣಾ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.