ಗ್ರಾ.ಪಂ. ಚುನಾವಣೆ: ಎಂ. ಗೊಲ್ಲಹಳ್ಳಿ ಕ್ಷೇತ್ರದ ಮರು ಎಣಿಕೆಗೆ ಆಗ್ರಹ

ತುಮಕೂರು, ಜ. ೯- ಇತ್ತೀಚಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆಯಲ್ಲಿ ಬೆಳಧರ ಗ್ರಾಮ ಪಂಚಾಯಿತಿಯ ಎಂ.ಗೊಲ್ಲಹಳ್ಳಿ ಕ್ಷೇತ್ರದ ಮತ ಎಣಿಕೆಯಲ್ಲಿ ಅಧಿಕಾರಿಗಳು ಎದುರಾಳಿಯೊಂದಿಗೆ ಸೇರಿ ನನಗೆ ಮೋಸ ಮಾಡಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ಸದರಿ ಕ್ಷೇತ್ರದ ಫಲಿತಾಂಶವನ್ನು ರದ್ದುಪಡಿಸಿ, ಮರು ಚುನಾವಣೆ ನಡೆಸುವಂತೆ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿ ಜಿ.ಎನ್.ರಂಗರಾಜು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಗೊಲ್ಲಹಳ್ಳಿ ಕ್ಷೇತ್ರದ ಒಂದು ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ಕ್ಷೇತ್ರ ಸೇರಿ ಎರಡು ಸ್ಥಾನಗಳಿಗೆ ೬ ಜನರು ಸ್ಪರ್ಧೆ ಮಾಡಿದ್ದು, ೮೦೪ ಮತಗಳು ಚಲಾವಣೆಯಾಗಿರುತ್ತವೆ. ಮತ ಎಣಿಕೆ ಮುಗಿದಾಗ ಅನುರಾಧ ೭೭, ಭಾಗ್ಯ ೨೫೭, ರಾಜೇಶ್ವರಿ ೫೪, ಜಿ.ಎನ್.ರಂಗರಾಜು ೧೫೨, ಜಿ.ಡಿ.ಲೋಕೇಶ್ ೧೫೧ ಹಾಗೂ ಸಂಜಯ್ ಎಂಬುವರಿಗೆ ೧೧೧ ಮತಗಳು ಬಂದಿದ್ದವು. ಮೊದಲ ಸುತ್ತಿನ ಮತಗಳ ಆಧಾರದಲ್ಲಿ ಭಾಗ್ಯ ಮತ್ತು ಜಿ.ಎನ್. ರಂಗರಾಜು ಅವರನ್ನು ವಿಜೇತರೆಂದು ಘೋಷಣೆ ಮಾಡಿದ್ದರು.
ಆದರೆ ಈ ಫಲಿತಾಂಶಕ್ಕೆ ಜಿ.ಡಿ. ಲೋಕೇಶ್ ಪರ ಏಜೆಂಟರು ಅಕ್ಷೇಪ ಎತ್ತಿದ ಪರಿಣಾಮ ತಿರಸ್ಕೃತಗೊಂಡ ಮತಗಳಲ್ಲಿ ಒಂದನ್ನು ಲೋಕೇಶ್ ಅವರ ಪರ, ಭಾಗ್ಯ ಅವರಿಗೆ ೧ ಮತಗಳು ಬಂದ ಪರಿಣಾಮ, ಜಿ.ಡಿ. ಲೋಕೇಶ್ ಮತ್ತು ರಂಗರಾಜು ಅವರುಗಳು ಸಮಬಲ ಸಾಧಿಸಿದ್ದರು ಎಂದರು.
ಇಬ್ಬರು ಅಭ್ಯರ್ಥಿಗಳಿಗೆ ೧೫೨ ಮತಗಳು ಬಂದ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಧರಿಸಲು ಲಾಟರಿ ಎತ್ತಲು ಮುಂದಾದಾಗ ನಾನು ವಿರೋಧಿಸಿದ್ದೆ. ಅಲ್ಲದೆ, ಮರು ಎಣಿಕೆಗೆ ಒತ್ತಾಯಿಸಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಒಪ್ಪದ ಕಾರಣ ನಾನು ಮತ್ತು ನನ್ನ ಸಂಗಡಿಗರು ಅಧಿಕಾರಿಗಳ ಈ ವರ್ತನೆ ವಿರೋಧಿಸಿ ಮತ ಎಣಿಕೆ ಕೇಂದ್ರದಿಂದ ಹೊರ ಬಂದೆವು.
ಆದರೆ ಇದಾದ ೩೦ ನಿಮಿಷಗಳ ನಂತರ ಅಧಿಕಾರಿಗಳೇ ನಮಗೆ ದೂರವಾಣಿ ಕರೆ ಮಾಡಿ, ಮರು ಎಣಿಕೆ ಮಾಡುವ ಬನ್ನಿ ಎಂದು ಕರೆಸಿ, ಈ ಬಾರಿ ಬರುವ ಫಲಿತಾಂಶಕ್ಕೆ ಇಬ್ಬರು ತಕರಾರು ತೆಗೆಯಬಾರದು ಎಂದು ಒಪ್ಪಿಗೆ ಪತ್ರ ಬರೆಸಿಕೊಂಡು ಮರು ಎಣಿಕೆ ಮಾಡಿದರು. ಆದರೆ ಮರು ಎಣಿಕೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಮತಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿದರು.
ಭಾಗ್ಯ ಅವರಿಗೆ ಹೆಚ್ಚುವರಿಯಾಗಿ ೬ ಮತಗಳು, ಜಿ.ಡಿ.ಲೋಕೇಶ್ ಅವರಿಗೆ ಹೆಚ್ಚುವರಿಯಾಗಿ ೫ ಮತಗಳು ಬಂದರೆ, ಜಿ.ಎನ್.ರಂಗರಾಜು ಆದ ನನಗೆ ಒಂದು ಮತ ಕಡಿಮೆ ಬಂದಿರುತ್ತದೆ. ಮೊದಲ ಎಣಿಕೆಗಿಂತ, ಮರು ಎಣಿಕೆಯಲ್ಲಿ ಹೆಚ್ಚುವರಿ ಮತಗಳು ಎಲ್ಲಿಂದ ಬಂದವು ಎಂಬುದನ್ನು ಅಧಿಕಾರಿಗಳು ಇದುವರೆಗೂ ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಮೊದಲು ಸುತ್ತಿನ ಮತ ಎಣಿಕೆಯಲ್ಲಿ ಸುಮಾರು ೩೮ ಜನ ಮತದಾರರು ಕೇವಲ ಒಬ್ಬ ಅಭ್ಯರ್ಥಿಗೆ ಮಾತ್ರ ಮತ ಹಾಕಿದ್ದು, ಎರಡನೇ ಬಾರಿ ಅವುಗಳ ಸಂಖ್ಯೆ ಕಡಿಮೆಯಾಗಲು ಹೇಗೆ ಸಾಧ್ಯ ಎಂಬುದಕ್ಕೆ ಇದುವರೆಗೂ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಎದುರಾಳಿ ಅಭ್ಯರ್ಥಿಯ ಜತೆ ಸೇರಿ ಮತ ಎಣಿಕೆ ಅಧಿಕಾರಿಗಳು ಅವ್ಯವಹಾರ ನಡೆಸಿ, ನನ್ನ ಸೋಲಿಗೆ ಕಾರಣವಾಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮಧ್ಯ ಪ್ರವೇಶಿಸಿ, ಈಗ ಘೋಷಣೆಯಾಗಿರುವ ಫಲಿತಾಂಶವನ್ನು ತಡೆಹಿಡಿದು, ಮರುಚುನಾವಣೆ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಹೋರಾಟಗಾರ ವಾಸುದೇವಕುಮಾರ್, ಗ್ರಾಮಸ್ಥರಾದ ಚಂದ್ರಪ್ಪ, ಕಂಬದ ರಂಗಯ್ಯ, ರಾಮಚಂದ್ರಯ್ಯ, ನಾಗರಾಜು, ಶಿವಕುಮಾರ್, ರಮೇಶ್, ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.