ಗ್ರಾ.ಪಂ. ಚುನಾವಣೆ: ಅಫಜಲಪೂರ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳಿಂದ ಹದ್ದಿನ ಕಣ್ಣು

ಕಲಬುರಗಿ.ಡಿ.21:ಅಫಜಲಪೂರ ತಾಲ್ಲೂಕಿನಲ್ಲಿ ಮಂಗಳವಾರ ಜರುಗಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಪಟ್ಟಣದ ಹೊರವಲಯದಲ್ಲಿರುವ ಮತಕೇಂದ್ರದ ಭದ್ರತಾ ಕೋಣೆಗಳಿಗೆ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ಅದೇ ರೀತಿ ಚುನಾವಣಾ ಅಧಿಕಾರಿಗಳಾದ ತಹಸಿಲ್ದಾರ್ ಶ್ರೀಮತಿ ನಾಗಮ್ಮ ಅವರೂ ಸಹ ವಿವಿಧೆಡೆ ಸಂಚರಿಸಿ ಮತದಾನದ ಸಿದ್ಧತೆ ಕುರಿತು ಖುದ್ದು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಡಾ. ಸೀಮಿ ಮರಿಯಮ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೋವಿಡ್-19 ನಿಯಮಗಳನ್ನು ಪಾಲಿಸಲು ಪ್ರತಿ ಬಾರಿಯೂ ಸೂಚಿಸುತ್ತೇವೆ. ಆದಾಗ್ಯೂ, ಕೆಲವರು ಪಾಲಿಸುವುದಿಲ್ಲ. ಹೀಗಾಗಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 13 ಕೇಂದ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 217 ಮತಗಟ್ಟೆಗಳ ಪೈಕಿ 55 ಸೂಕ್ಷ್ಮ ಹಾಗೂ 28 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. ಅತೀ ಸೂಕ್ಷ್ಮ ಹೊಂದಿರುವ ಮತಗಟ್ಟೆಗಳಲ್ಲಿ ಗೃಹರಕ್ಷಕ ಸಿಬ್ಬಂದಿ ಮತ್ತು ಅವಶ್ಯವಿದ್ದಲ್ಲಿ ಪೋಲಿಸ್ ಪೇದೆಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ನಮ್ಮಮೊಬೈಲ್ ಅಧಿಕಾರಿಗಳಿಗೆ ಪ್ರತಿ ಮತಗಟ್ಟೆಗಳಿಗೆ ತೆರಳಲು ವಾಹನಗಳ ಅವಕಾಶ ಮಾಡಿಕೊಡಲಾಗಿದ್ದು, ಗಂಟೆಗೊಮ್ಮೆ ಮಾಹಿತಿ ನೀಡಲು ಸೂಚಿಸಿದ್ದೇನೆ. ಒಬ್ಬರು ಡಿವೈಎಸ್‍ಪಿ, ಮೂವರು ಸಿಪಿಐ, ಹತ್ತು ಜನ ಪಿಎಸ್‍ಐಗಳು, 25 ಜನ ಎಎಸ್‍ಐಗಳು, 109 ಮುಖ್ಯ ಪೇದೆಗಳು, 167 ಪೇದೆಗಳು, 1 ಡಿಎಆರ್, ಮೂರು ಕೆಎಸ್‍ಆರ್‍ಪಿ ತುಕುಡಿಗಳು, 92 ಗೃಹರಕ್ಷಕ ದಳದ ಸಿಬ್ಬಂದಿ, 8 ನಿರ್ಭಯ ಮೋಟಾರು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಚುನಾವಣೆಯಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಇನ್ನು ಭದ್ರತೆಗೆ ಸಂಬಂಧಿಸಿದಂತೆ ಮತಗಟ್ಟೆ ಕೇಂದ್ರದ ಸುತ್ತಲೂ 100 ಮೀಟರ್ ಅಂತರದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟವನ್ನೂ ಸಹ ನಿಷೇಧಿಸಲಾಗಿದ್ದು, ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಲು ಪೋಲಿಸ್ ಇಲಾಖೆಯಿಂದ ಹದ್ದಿನ ಕಣ್ಣು ಇರಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಮಹಾದೇವ್ ಪಂಚಮುಖಿ, ಉಪ ತಹಸಿಲ್ದಾರ್ ವೀರಯ್ಯ ಹೊಸಮಠ್, ಶಿರಸ್ತೆದಾರರಾದ ಮಂಜುನಾಥ್ ಗಾಳಪ್ಪ ಕುಂಬಾರ್ ಮುಂತಾದವರು ಉಪಸ್ಥಿತರಿದ್ದರು.
ಚುನಾವಣಾಧಿಕಾರಿಗಳ ಕಾರ್ಯ ಮಾದರಿ: ನಾಲ್ಕು ತಿಂಗಳು ಗರ್ಭಿಣಿಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಅಧಿಕಾರಿಗಳೂ ಆಗಿರುವ ತಹಸಿಲ್ದಾರ್ ನಾಗಮ್ಮ ಅವರು ಮಂಗಳವಾರದ ಗ್ರಾಮ ಪಂಚಾಯಿತಿ ಮತದಾನ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ದಿಸೆಯಲ್ಲಿ ವಿವಿಧೆಡೆ ಸಂಚರಿಸಿದರು.
ಮಾಸ್ಕ್ ಧರಿಸಿ ಅತ್ಯಂತ ಕ್ರಿಯಾಶೀಲರಾಗಿ ಓಡಾಡಿದ ಚುನಾವಣಾ ಅಧಿಕಾರಿಗಳು ಗಮನಸೆಳೆದರು.