ಗ್ರಾ.ಪಂ. ಗೊಂದು ಸರ್ಕಾರಿ ಖರೀದಿ ಕೇಂದ್ರ ತೆರೆಯಲು ಒತ್ತಾಯ

ರಾಯಚೂರು, ಮೇ.೨೬- ಕೂಡಲೇ ಗ್ರಾಮ ಪಂಚಾಯತಿಗೊಂದು ಸರ್ಕಾರಿ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ,ಹಸಿರು ಸೇನೆ ಹಾಗೂ ಕರ್ನಾಟಕ ರೈತ ಸಂಘ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಖಾಸಗಿ ಖರೀದಿದಾರರು ಸರಕಾರ ನಿಗದಿ ಮಾಡಿದ ಬೆಂಬಲ ಬೆಲೆಯಲ್ಲೇ ಭತ್ತ ಖರೀದಿ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಪಿಎಂಸಿ ಆವರಣದಲ್ಲಿನ ಖರೀದಿ ವ್ಯಾವಹಾರದ ಸಮಯವನ್ನು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ನಿಗಧಿ ಮಾಡಬೇಕು.೧೦ ಎಕರೆಗಿಂತ ಕಡಿಮೆ ಭೂಮಿಯುಳ್ಳ ರೈತರು ಬೆಳೆದ ಭತ್ತಕ್ಕೆ ಸರ್ಕಾರ ಆಡಮಾನ ಸಾಲ ಒದಗಿಸಬೇಕು. ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ ೨೫ ಸಾವಿರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ಕೃಷಿ,ಕಂದಾಯ,ಎಪಿಎಂಸಿ,ಆಹಾರ ಇಲಾಖೆ ಮತ್ತು ಚುನಾಯಿತ ಪ್ರತಿನಿಧಿಗಳು, ರೈತ ಸಂಘಟಕರ ನೇತೃತ್ವದ ಸಮಿತಿ ರಚನೆ ಮಾಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವ ಅಧ್ಯಕ್ಷ
ಚಾಮರಸ ಮಾಲೀಪಾಟಿಲ್,ಡಿ.ಹೆಚ್ . ಪೂಜಾರ, ಚಿಟ್ಟಿ ಬಾಬು,ಕೆ.ಜಿ ವೀರೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.