ಗ್ರಾ. ಪಂ.ಗಳಲ್ಲಿ ಕೂಸಿನ ಮನೆ: ಪ್ರಿಯಾಂಕ ಖರ್ಗೆ

ಬೆಂಗಳೂರು,ಸೆ.೧೭:ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಮಹಿಳೆಯರ ಮೂರು ವರ್ಷದ ಒಳಗಿನ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯದ ಎಲ್ಲ ಗ್ರಾಮಪಂಚಾಯ್ತಿಗಳಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕಖರ್ಗೆ ಹೇಳಿದ್ದಾರೆ.
ಈ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳು ದಿನದ ಆರೂವರೆ ಗಂಟೆ ಕಾರ್ಯನಿರ್ವಹಿಸುತ್ತದೆ. ರಾಜ್ಯದ ಎಲ್ಲ ೪ ಸಾವಿರ ಗ್ರಾಮಪಂಚಾಯ್ತಿಗಳಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಶಿಶುಪಾಲನಾ ಕೇಂದ್ರಗಳಿಗೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ೧೦ ಮಕ್ಕಳ ಆರೈಕೆದಾರರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುವುದು. ಇದರಿಂದ ೪೦ ಸಾವಿರ ನರೇಗಾ ಕ್ರಿಯಾಶೀಲ ಉದ್ಯೋಗಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಕ್ಕಳ ಆರೈಕೆದಾರರಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಸಲಾಗುವುದು ಎಂದರು.
ಪ್ರತಿ ಕೂಸಿನ ಮನೆ ಕೇಂದ್ರದಲ್ಲಿ ನರೇಗಾ ಕ್ರಿಯಾಶೀಲಾ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ಮೂರು ವರ್ಷದೊಳಗಿನ ಗರಿಷ್ಠ ೨೫ ಮಕ್ಕಳನ್ನು ದಾಖಲೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಕೂಸಿನ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ೪೦ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದಲ್ಲದೆ ಕೂಸಿನ ಶಿಶುಪಾಲನಾ ಕೇಂದ್ರ ನಡೆಸಲು ಅಗತ್ಯವಿರುದ ಕಟ್ಟಡ ಇತರೆ ಮೂಲಸೌಲಭ್ಯಗಳನ್ನು ಹಾಗೂ ಅನುದಾನವನ್ನು ಗ್ರಾಮಪಂಚಾಯ್ತಿಯಿಂದ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕಖರ್ಗೆ ತಿಳಿಸಿದ್ದಾರೆ.