ಗ್ರಾ.ಪಂ ಕಚೇರಿಗೆ ಬೆಂಕಿ : ಸುಟ್ಟು ಕರಕಲಾದ ದಾಖಲೆ ಸಲಕರಣೆಗಳು

ರಾಯಚೂರು,ಆ.೨- ಗ್ರಾಮ ಪಂಚಾಯತಿ ಕಚೇರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಚೇರಿಯಲ್ಲಿದ್ದ ಸಲಕರಣೆಗಳು, ದಾಖಲೆಗಳು ಸುಟ್ಟು ಕರಕಲಾಗಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬೆಂಕಿ ಅವಘಡ ಜರುಗಿದೆ. ಕಂಪ್ಯೂಟರ್ ಸೇರಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಬೆಂಕಿ ಅನಾಹುತಕ್ಕೆ ಕಚೇರಿಯಲ್ಲಿ ಮಹತ್ವದ ದಾಖಲೆಗಳು ಭಸ್ಮವಾಗಿವೆ. ಮೊದಲಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಕಟ್ಟಡಕ್ಕೆ ಬೆಂಕಿ ಆವರಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ಹೊಂದಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗ್ರಾಮಸ್ಥರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.