ಗ್ರಾ.ಪಂ ಅವ್ಯವಹಾರದ ಬಗ್ಗೆ ವಿಶೇಷ ತನಿಖೆಗೆ ಆಗ್ರಹಿಸಿ ಮನವಿ

ತಿ.ನರಸೀಪುರ: ಜೂ.09: ತಾಲ್ಲೂಕಿನ ತಲಕಾಡು ಗ್ರಾಮ ಪಂಚಾಯಿತಿಯಲ್ಲಿ ಸುರಕ್ಷತಾ ಪರಿಕರಗಳಿಲ್ಲದೇ ಪೌರಕಾರ್ಮಿಕನನ್ನು ಚರಂಡಿಗಿಳಿಸಿ ಸ್ವಚ್ಛಗೊಳಿಸಿರುವ ಪ್ರಕರಣದ ಬಗ್ಗೆ ಹಾಗೂ ಪಂಚಾಯಿತಿಯ ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ತಹಶೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಿದೆ.
ಕೋವಿಡ್ ಸೋಂಕಿನಿಂದ ಜನರು ಸಾವು ನೋವು ಗೀಡಾಗುತ್ತಿರುವ ಸಮಯದಲ್ಲಿ ಹೊರ ಗುತ್ತಿಗೆ ಪೌರ ಕಾರ್ಮಿಕ ಮಲ್ಲೇಶ್ ಎಂಬಾತನಿಂದ ಯಾವುದೇ ಸುರಕ್ಷತಾ ಪರಿಕರಗಳನ್ನು ನೀಡದೇ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸಲು ಪಂಚಾಯಿತಿ ಅಭಿವೃದ್ಧಿಅಧಿಕಾರಿ ಹಾಗೂ ಕೆಲ ಜನಪ್ರತಿನಿಧಿಗಳು ಸೂಚಿಸಿ ಸ್ವಚ್ಛತೆ ಮಾಡಿಸಿದ್ದಾರೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ಮುಚ್ಚಿ ಹಾಕಲು ಆತನೇ ಸ್ವಯಂ ಪ್ರೇರಿತನಾಗಿ ಮಾಡಿದ್ದಾನೆ ಎಂಬ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಸಮಿತಿಯ ತಾಲ್ಲೂಕು ಸಂಚಾಲಕ ಕುಕ್ಕೂರು ರಾಜು ಹಾಗೂ ಸಮಿತಿಯ ಮುಖಂಡರು ಮನವಿಯಲ್ಲಿ ಆರೋಪಿಸಿದ್ದಾರೆ ಹಾಗೂ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಪಂಚಾಯಿತಿಯಲ್ಲಿ ಅಕ್ರಮ ವ್ಯವಹಾರಗಳ ನಡೆದಿವೆ ಎನ್ನಲಾಗುತ್ತಿದ್ದು, 2015-16ನೇ ಸಾಲಿನಿಂದ 2021ರವರೆಗೆ ವಿವಿಧ ಹಣಕಾಸು ಯೋಜನೆಗಳ ಅನುದಾನ ಬಳಕೆ, ಶೌಚಾಲಯ, ಎಸ್ ಸಿ.ಎಸ್ಟಿ ಅನುದಾನ ಬಳಕೆ ಸೇರಿದಂತೆ ಪಂಚಾಯಿತಿಯಲ್ಲಿನ ವಿವಿಧ ಕೆಲಸ ಕಾರ್ಯಗಳ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿಸುವಂತೆ ಅವರು ಒತ್ತಾಯಿಸಿದ್ದಾರೆ.
ಈ ವೇಳೆ ಸಮಿತಿಯ ಪದಾಧಿಕಾರಿಗಳಾದ ಹ್ಯಾಕನೂರು ರಾಚಪ್ಪ, ಕುರುಬೂರು ಮಹೇಶ್, ಮೂಗೂರು ಮಹದೇವಸ್ವಾಮಿ, ತೊಟ್ಟವಾಡಿ ಮಹದೇವ, ರಂಗಸಮುದ್ರ ನಂಜುಂಡ, ಹೊಸ ಮಾಲಂಗಿ ಮಹದೇವಸ್ವಾಮಿ, ಚಂದಹಳ್ಳಿ ನಂಜುಂಡಯ್ಯ ಇದ್ದರು.ಗ್ರಾ.ಪಂ ಅವ್ಯವಹಾರದ ಬಗ್ಗೆ ವಿಶೇಷ ತನಿಖೆಗೆ ಆಗ್ರಹಿಸಿ ಮನವಿ