ಗ್ರಾ.ಪಂ. ಅಭ್ಯರ್ಥಿ ಮಗುವಿಗೆ ಜನ್ಮ

ಕಲಬುರಗಿ,ಡಿ.೨೭-ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾ.ಪಂ.ಚುನಾವಣೆಗೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಮತದಾನದ ಮುನ್ನಾದಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂಗಳಗಿ ಗ್ರಾಮದ ವಾರ್ಡ್ ನಂ.೪ರ ಅಭ್ಯರ್ಥಿ ಮಂಜುಳಾ ಸಾಯಬಣ್ಣಾ ಗುಡುಬಾ ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಕ್ಷೇಮವಾಗಿದ್ದಾರೆ. ಮಂಜುಳಾ ಹಾಗೂ ಅವರ ಅತ್ತೆ ಇಬ್ಬರು ಚುನಾವಣಾ ಕಣದಲ್ಲಿದ್ದು, ಅತ್ತೆ ವಾರ್ಡ್ ಸಂಖ್ಯೆ ೩ರಲ್ಲಿ ಸ್ಪರ್ಧೆ ಮಾಡಿದರೆ, ಸೊಸೆ ಮಂಜುಳಾ ವಾರ್ಡ್ ನಂ.೪ ರಿಂದ ಸ್ಪರ್ಧೆ ಮಾಡಿದ್ದಾರೆ. ಇದೀಗ ಮನೆಗೆ ಮಹಾಲಕ್ಷ್ಮೀ ರೂಪದಲ್ಲಿ ಹೆಣ್ಣು ಮಗು ಬಂದಿದ್ದು, ಗೆಲವು ಕೂಡ ನಮ್ಮ ಮನೆಗೆ ಬರಲಿದೆ ಎಂದು ಕುಟುಂಬಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತಗಟ್ಟೆ ಮುಂದೆ ಕುಸಿದು ಬಿದ್ದ ಗರ್ಭಿಣಿ
ಇಂದು ಗ್ರಾಮ ಪಂಚಾಯತಿ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತ ಚಲಾಯಿಸಲು ಬಂದು ಮತಗಟ್ಟೆ ಮುಂದೆ ಗರ್ಭಿಣಿಯೋರ್ವಳು ಕುಸಿದು ಬಿದ್ದ ಘಟನೆ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದ ಮತಗಟ್ಟೆ ಸಂಖ್ಯೆ ೨೨ರಲ್ಲಿ ನಡೆದಿದೆ.
ಗರ್ಭಿಣಿ ಶಿವಮ್ಮ ಸುಮಾರು ಹೊತ್ತು ಕ್ಯೂನಲ್ಲಿ ನಿಂತ ವೇಳೆ ತಲೆಸುತ್ತಿನಿಂದ ಕುಸಿದು ಬಿದ್ದಿದ್ದಾರೆ. ಬಳಿಕ ಚುನಾವಣಾ ಸಿಬ್ಬಂದಿ ಆಗಮಿಸಿ ಆ ಕೂಡಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಹುಮ್ಮಸ್ಸಿನಿಂದ ಮತದಾನ
ಕೊರೆಯುವ ಚಳಿಯ ನಡುವೆಯೂ ವಯೋವೃದ್ಧರು ಹುಮ್ಮಸ್ಸಿನಿಂದ ಮತ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿ ಯುವಕರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಕನಿಷ್ಟ ೧೪ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೈ ಕೊರೆವ ಚಳಿ ಇದೆ. ಚಿತ್ತಾಪುರ ತಾಲ್ಲೂಕಿನ ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೬೫ರಲ್ಲಿ ಕೊರೆವ ಚಳಿಯಲ್ಲೂ ವಯೋವೃದ್ಧರು ತಮ್ಮ ಹಕ್ಕು ಚಲಾಯಿಸಿದರು.