ಗ್ರಾ.ಪಂನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಐತಿಹಾಸಿಕ ಜಯ

ಹನೂರು: ಜ.07: ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿಯ 31 ಸ್ಥಾನಗಳ ಪೈಕಿ 28 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿ ಐತಿಹಾಸಿಕವಾದ ಜಯವನ್ನು ಗಳಿಸಿರುವ ಹಿನ್ನೆಲೆಯಲ್ಲಿ ಗೆಲುವಿನ ರೂವಾರಿಗಳಾದ ಹನೂರಿನ ಜನಾಶ್ರಯ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರು ಜನಧ್ವನಿ ಬಿ.ವೆಂಕಟೇಶ್ ಅವರ ನೇತೃತ್ವದಲ್ಲಿ ಬುಧವಾರ ಮಲೆಮಹದೇಶ್ವರ ಬೆಟ್ಟ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಾಗೂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ವೆಂಕಟೇಶ್‍ರವರಿಗೆ ಅಭಿನಂದನೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಜನಧ್ವನಿ ವೆಂಕಟೇಶ್ ಅವರು ಉದ್ಘಾಟಿಸಿದರು.
ನಂತರ ನೂತನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜನಧ್ವನಿ ವೆಂಕಟೇಶ್ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಕಾರಣರಾದ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೂತನ ಸದಸ್ಯರುಗಳು ತಮ್ಮ ಗ್ರಾಮಗಳಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಈ ಭಾಗದ ಗ್ರಾಮಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸದೇ ಇರುವುದರ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಮಾರ್ಮಿಕವಾಗಿ ಟೀಕಿಸಿದರು. ಟ್ರಸ್ಟ್ ವತಿಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಸುದೀರ್ಘವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಹಲಗ ತಂಬಡಿ, ಮಾದೇವಸ್ವಾಮಿ, ಬಸವ ಬಳಗದ ಅಧ್ಯಕ್ಷ ಶೇಖರ, ಮ.ಮ.ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಬಿಜೆಪಿ ಮುಖಂಡರುಗಳು, ಜನಾಶ್ರಯ ಟ್ರಸ್ಟ್‍ನ ಲೋಕೇಶ್ ಜತ್ತಿ, ಅರವಿಂದ, ಚಿರಂಜಿವಿ,ಜಯಂತ್, ನೂತನ ಗ್ರಾ.ಪಂ.ಸದಸ್ಯರುಗಳು ಸೇರಿದಂತೆ ಜನಧ್ವನಿ ಬಿ.ವೆಂಕಟೇಶ್ ಅಭಿಮಾನಿ ಬಳಗದ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.