ಕೋಲಾರ,ಜೂ,೮- ಗ್ರಾಮಾಭಿವೃದ್ದಿಗೆ ಪೂರಕವಾಗಿರುವ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ಅನುಮೋದಿಸಲ್ಪಟ್ಟ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ನೀಡಿರುವ ಗುರಿ ಸಾಧಿಸಿ, ಹಣ,ಆಮಿಷಗಳಿಗೆ ಒಳಗಾಗದೇ ಜನರ ಕೆಲಸ ಮಾಡಿ ಎಂದು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ತಾಕೀತು ಮಾಡಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಪಿಡಿಒಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣಾಭಿವೃದ್ದಿ,ಚರಂಡಿ,ರಸ್ತೆ, ಶಾಲೆಗಳ ಕಾಂಪೌಂಡ್, ಆಟದ ಮೈದಾನ ಸಿದ್ದತೆ ಈ ಎಲ್ಲಾ ಕಾರ್ಯಗಳಿಗೂ ನರೇಗಾದದಲ್ಲಿ ಹೇರಳ ಅನುದಾನವಿದ್ದು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಹಳ್ಳಿಗಳ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಿ ಎಂದು ಕಿವಿಮಾತು ಹೇಳಿದರು.
ಗ್ರಾಮಪಂಚಾಯಿತಿ ಗ್ರಾಮ ಸರ್ಕಾರವಿದ್ದಂತೆ ನಿಮಗೆ ಎಲ್ಲಾ ರೀತಿಯ ಅಧಿಕಾರ ನೀಡಲಾಗಿದೆ, ನೀವು ಜನರ ಕೆಲಸವನ್ನು ಮಾಡುವಾಗ ಎಚ್ಚರವಹಿಸಿ, ಜನರನ್ನು ಅಲೆಸದಿರಿ, ಹಣ ಆಮಿಷಗಳಿಗೆ ಬಲಿಯಾಗಿ ತಪ್ಪು ಮಾಡಬೇಡಿ ಎಂದು ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ ಅವರು, ಸ್ವಚ್ಚತೆ ಕಾಪಾಡುವಲ್ಲಿ ಗ್ರಾಮ ಪಂಚಾಯಿತಗಳ ಪಾತ್ರ ಅತಿ ಮುಖ್ಯವಾಗಿದೆ, ಸೂಚಿಸುತ್ತ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ಸಮಸ್ಯೆ ಇಲ್ಲದಂತೆ ಪೂರ್ಣಗೊಳಿಸಲು ಸೂಚಿಸಿದರು.
ನರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಒತ್ತುವರಿಗಳನ್ನು ತಕ್ಷಣ ತೆರವುಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ ಶಾಸಕರು, ಕೈಗಾರಿಕೆಗಳು ಬಂದಿರುವುದರಿಂದ ಸ್ಥಳೀಯರಿಗೆ ಒಳಿತಾಗಿದೆ, ಮತ್ತಷ್ಟು ಉದ್ಯೋಗಗಳು ಸಿಗುವಂತೆ ಮಾಡಲು ಕಂಪನಿಗಳ ಮಾಲೀಕರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಯಾವ ಗ್ರಾಮದಲ್ಲಿ ಶುದ್ದ ನೀರಿನ ಘಟಕಗಳಿಲ್ಲ ಎಂಬುದನ್ನು ಪಟ್ಟಿ ಮಾಡಿಕೊಡಿ, ಜನರಿಗೆ ನಾವು ಮೊದಲು ಕುಡಿಯುವ ನೀರು ಕೊಡಬೇಕು, ಇದು ಆದ್ಯತೆಯ ಮೇಲೆ ಆಗಬೇಕು, ಪಿಡಿಒಗಳು ಈ ಕುರಿತು ಕೂಡಲೇ ಕ್ರಮವಹಿಸಿ ಎಂದರು.
ಹಳ್ಳಿ ಅಭಿವೃದ್ದಿಗೆ ಅನುದಾನ ಬಳಸಿ
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಹಳ್ಳಿಗಳ ಸಮಗ್ರ ಅಭಿವೃದ್ದಿಗೆ ಅನುದಾನದ ಕೊರತೆ ಇಲ್ಲ, ನೀವು ಕ್ರಿಯಾಯೋಜನೆ ರೂಪಿಸಿ ಆಗಬೇಕಿರುವ ಕೆಲಸ ಹಾಗೂ ಅಗತ್ಯ ಅನುದಾನದ ಮಾಹಿತಿ ನೀಡದರೆ ಸರ್ಕಾರದಿಂದ ಅದನ್ನು ಬಿಡುಗಡೆ ಮಾಡಿಸುವ ಕೆಲಸ ನಾವು ಮಾಡುತ್ತೇವೆ ಎಂದರು.
ಕೆಲವು ಪಿಡಿಒಗಳ ಕುರಿತು ಗ್ರಾಮೀಣ ಭಾಗದಲ್ಲಿ ತಪ್ಪು ಅಭಿಪ್ರಾಯವಿದೆ, ಹಣ ಕೊಡದಿದ್ದರೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸವೇ ಆಗೋದಿಲ್ಲ ಎಂಬ ದೂರು ಇದೆ ಎಂದ ಅವರು, ನೀವು ಇರುವುದು ಜನರ ಕೆಲಸ ಮಾಡಲು ಇಂತಹ ದೂರುಗಳಿಗೆ ಅವಕಾಶ ನೀಡಬೇಡಿ, ಕಚೇರಿಗೆ ಬರುವ ಜನರ ಕೆಲಸ ಮೊದಲು ಮಾಡಿಕೊಡಿ, ಖಾತೆ ಬದಲಾವಣೆ ಮತ್ತಿತರ ಕೆಲಸಗಳಿಗೆ ಕಾಲಮಿತಿ ಹಾಕಿಕೊಳ್ಳಿ ಎಂದು ಸೂಚಿಸಿದರು.
ನರೇಗಾದಡಿ ಸಾಕಷ್ಟು ಅನುದಾನವಿದ್ದರೂ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ದಿ ಕೆಲಸಗಳೇ ಆಗಿಲ್ಲ, ಈ ಯೋಜನೆಯಡಿ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂಬ ದೂರುಗಳು ಇವೆ, ಇದೆಲ್ಲವನ್ನು ಸರಿಪಡಿಸಿ, ಒಟ್ಟಾರೆ ನರೇಗಾ ಅತ್ಯಂತ ದೂರದೃಷ್ಟಿಯಿಂದ ಜಾರಿಗೆ ತಂದಿರುವ ಯೋಜನೆಯಾಗಿದ್ದು, ಇದರಿಂದ ಹಳ್ಳಿಗಳು ಬದಲಾಗಬೇಕು ಎಂದರು.
ಪಿಡಿಒಗಳು ಕಚೇರಿಗೆ ಸರಿಯಾಗಿ ಹೋಗುತ್ತಿಲ್ಲ ಎಂಬ ದೂರುಗಳು ಇವೆ, ನಿಮಗೆ ಸರ್ಕಾರ ಸಂಬಳ ನೀಡುತ್ತಿರೋದು ನೀವು ಜನರ ಸೇವೆ ಮಾಡಲು ಎಂಬುದನ್ನು ಮರೆಯದಿರಿ ಎಂದ ಅವರು, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ ಈಗಾಗಲೇ ಅಳವಡಿಸಿರುವ ಶುದ್ದ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಕೆಟ್ಟರೆ ಕೂಡಲೇ ಸರಿಪಡಿಸಲು ಕ್ರಮವಹಿಸಿ ಎಂದು ತಾಕೀತು ಮಾಡಿದರು.
ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪಿ. ಮುನಿಯಪ್ಪ ಹಾಜರಿದ್ದು, ಗ್ರಾಮೀಣಾಭಿವೃದ್ದಿ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳು ನರೇಗಾದಡಿ ನಡೆಸುತ್ತಿರುವ ಕಾಮಗಾರಿಗಳ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಯೋಜನಾಧಿಕಾರಿ ಎನ್.ರಮೇಶ್, ಜಿಲ್ಲಾ ನೌಕರರ ಸಂಘದ ಕಾರ್ಯಾಧ್ಯಕ್ಷ ಹಾಗೂ ತಾಪಂ ಅಧೀಕ್ಷಕ ಎನ್.ಶ್ರೀನಿವಾಸ್ ರೆಡ್ಡಿ ಹಾಗೂ ತಾಲೂಕಿನ ೩೪ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.