ಗ್ರಾ.ಪಂಗಳಿಗೆ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಿ ಚಳುವಳಿ

ಪಿರಿಯಾಪಟ್ಟಣ: ಡಿ.03:- ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ವಾಮಮಾರ್ಗ ಅನುಸರಿಸುವ ಮೂಲಕ ಸ್ವಾರ್ಥ ಸಾಧನೆಯಲ್ಲಿ ತೊಡಗಿವೆ ಎಂದು ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ವಾಟಾಳ್ ನಾಗರಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಗ್ರಾ.ಪಂಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿ ಗೋಣಿಚೀಲ ಚಳುವಳಿ ನಡೆಸಿ ಅವರು ಮಾತನಾಡಿದರು, ಎಂಎಲ್‍ಸಿ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಅವರದೇ ಆದ ಚಿಂತನೆಯಿಂದ ಮತ ಯಾಚಿಸಿ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಆದರೆ ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ಸಮಸ್ಯೆಗಳಿದ್ದು ಸಮಸ್ಯೆ ಪರಿಹರಿಸುವ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಚಿಂತಿಸುತ್ತಿಲ್ಲ, ಗ್ರಾ.ಪಂ ಗಳು ಪ್ರಜಾಪ್ರಭುತ್ವದ ಬುನಾದಿಯಾಗಿ ತಾಯಿಬೇರು ಎನ್ನಿಸಿದೆ, ತಮ್ಮ ಗ್ರಾಮಗಳ ಸಮಸ್ಯೆಗಳಿಗೆ ಗ್ರಾ.ಪಂ ಸದಸ್ಯರು ಸ್ಪಂದಿಸುವ ಹೊಣೆಗಾರಿಕೆ ಹೊಂದಿದ್ದು ಆ ಸದಸ್ಯರಿಗೆ ನೀಡುತ್ತಿರುವ ಗೌರವ ಧನ ಬಿಡಿಗಾಸಾಗಿದ್ದು ಯಾವುದಕ್ಕೂ ಉಪಯೋಗವಾಗುತ್ತಿಲ್ಲ, ಸಂಸದರು ಮತ್ತು ಶಾಸಕರು ಲಕ್ಷಗಟ್ಟಲೆ ವೇತನ ಮತ್ತು ಇತರ ಭತ್ಯೆಗಳನ್ನು ಪಡೆಯುತ್ತಿದ್ದು ಗ್ರಾ.ಪಂ ಸದಸ್ಯರ ಸಮಸ್ಯೆಯನ್ನು ಯಾರೂ ಗಮನಿಸುತ್ತಿಲ್ಲ, ಗ್ರಾ.ಪಂ ಸದಸ್ಯರು ಧೈರ್ಯವಾಗಿ ನನ್ನನ್ನು ಆರಿಸಿದರೆ ಅವರಿಗೆ ಪ್ರತಿ ತಿಂಗಳು ಐದು ಸಾವಿರ ಮಾಸಿಕ ಭತ್ಯೆ ಮತ್ತು ಅಧ್ಯಕ್ಷರಿಗೆ ಹತ್ತು ಸಾವಿರ ಹಾಗೂ ಉಪಾಧ್ಯಕ್ಷರಿಗೆ ಏಳೂವರೆ ಸಾವಿರ ಮಾಸಿಕ ಭತ್ಯೆ ಕೊಡಿಸಲು ಹೋರಾಟ ಮಾಡುತ್ತೇನೆ ಎಂದರು.
ಇದೇ ವೇಳೆ ತಾಲ್ಲೂಕಿನ ತಂಬಾಕು ರೈತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತರಾದ ಶೈಲೇಶ್, ಅಂಕನಾಯಕ, ಶಿವಣ್ಣ, ಚೆನ್ನನಾಯಕ, ಗಂಗಾ ಧರ್, ವಸಂತ್ ಕುಮಾರ್ ಮತ್ತಿತರರಿದ್ದರು.