ಗ್ರಾಹಕ ಆಯೋಗದಲ್ಲಿ ದೂರುಗಳಿಗೆ 90 ದಿನದಲ್ಲಿ ಪರಿಹಾರ

ಚಿತ್ರದುರ್ಗ.ಡಿ.೨೭; ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದ ಮುಂದೆ ಬರುವ ಯಾವುದೇ ಪ್ರಕರಣಗಳನ್ನು ಕೇವಲ 90 ದಿನದೊಳಗೆ ಪರಿಹಾರ ನೀಡಿ, ವಿವಾದ ಬಗೆಹರಿಸಲಾಗುವುದು. ಇದು ಗ್ರಾಹಕರ ಆಯೋಗದ ಕರ್ತವ್ಯವೂ ಹೌದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ಜಿ.ಶ್ರೀಪತಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾ ಶಾಸ್ತ್ರ ಇಲಾಖೆ ,  ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ  ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಿವಾದ ಬಗೆಹರಿಸಿಕೊಳ್ಳಲು ಯಾವುದೇ ರೀತಿಯ ಖರ್ಚು ಆಗುವುದಿಲ್ಲ. ಹಾಗಾಗಿ ಸೇವಾ ನ್ಯೂನತೆ ಇದ್ದಾಗ ಗ್ರಾಹಕ ಆಯೋಗ ಸಂಪರ್ಕಿಸಬಹುದು ಎಂದರು.ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ವಸ್ತುಗಳನ್ನು ಆನ್‍ಲೈನ್‍ನಲ್ಲಿ ಖರೀದಿ ಮಾಡಲಾಗುತ್ತಿದೆ. ಆಫ್‍ಲೈನ್‍ಗಿಂತ ಆನ್‍ಲೈನ್  ವ್ಯವಹಾರದ ಅವಶ್ಯಕತೆಯೂ ಇದೆ. ಈ ಸಂದರ್ಭದಲ್ಲಿ ವಸ್ತುವಿನಲ್ಲಿ ನ್ಯೂನತೆಯಾದಾಗ, ನ್ಯೂನತೆಯಾಗುವುದಕ್ಕಿಂತ ಮುಂಚಿತವಾಗಿ ನೀವು ಖರೀದಿ ಮಾಡಿದಂತಹ ಒರಿಜಿನಲ್ ಬಿಲ್‍ಅನ್ನು ಇಟ್ಟುಕೊಂಡು, ಈ ಬಿಲ್‍ನ್ನು ಗ್ರಾಹಕರ ಆಯೋಗದ ಮುಂದೆ ಹಾಜರುಪಡಿಸಬೇಕಾಗುತ್ತದೆ. ಆನ್‍ಲೈನ್ ವ್ಯವಹಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೋಸದ ಜೊತೆಗೆ ನ್ಯೂನತೆಗಳು ಹೆಚ್ಚಳವಾಗಿವೆ. ಸೇವಾ ನ್ಯೂನತೆ ಉಂಟಾಗ ಗ್ರಾಹಕ ಆಯೋಗ ಸಂಪರ್ಕ ಮಾಡಿದಾಗ ಅತೀ ಕಡಿಮೆ ಸಮಯದಲ್ಲಿ ನ್ಯಾಯಬದ್ಧವಾಗಿ ಆದೇಶ ಹಾಗೂ ಪರಿಹಾರ ದೊರೆಯಲಿದೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸೇವಾ ನ್ಯೂನತೆಗೆ ಸಂಬಂಧಿಸಿದ ದೂರು ಸಲ್ಲಿಸಬೇಕಾದರೆ ರೂ.5 ಲಕ್ಷದವರೆಗೆ ಯಾವುದೇ ಶುಲ್ಕ ಕಟ್ಟುವಂತಿಲ್ಲ. 5 ರಿಂದ 10 ಲಕ್ಷದವರೆಗೆ ರೂ.500 ಶುಲ್ಕ, 10 ರಿಂದ 20 ಲಕ್ಷದವರೆಗೆ ರೂ.800 ಶುಲ್ಕ, 20 ಲಕ್ಷದಿಂದ 50 ಲಕ್ಷದವರೆಗೆ ರೂ.1000 ಶುಲ್ಕ ನಿಗಧಿಪಡಿಸಲಾಗಿದೆ. ವಕೀಲರನ್ನು ನೇಮಿಸಿಕೊಳ್ಳದೇ, ನಿಮ್ಮ ಪ್ರಕರಣದ ತಕರಾರುನ್ನು ಆಯೋಗದ ಮುಂದೆ ಮಂಡಿಸಿ, ಕಾನೂನುಬದ್ಧವಾಗಿ ಪರಿಶೀಲನೆ ಮಾಡಿ ಆಯೋಗ ಪರಿಹಾರ ನೀಡಲಿದೆ ಎಂದರು.