ಗ್ರಾಹಕರ ಹಣ ಮರುಪಾವತಿಸದಿದ್ದರೆ ಆತ್ಮಹತ್ಯೆಗೂ ಸಿದ್ಧಃ ಅರವಿಂದ ಕುಲಕರ್ಣಿ

ವಿಜಯಪುರ, ಡಿ.30-ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕೋಟ್ಯಾಂತರ ಹಣ ತೊಡಗಿಸಿದ ಗ್ರಾಹಕರು ವಂಚನೆಗೆ ಒಳಗಾಗಿದ್ದು ಕೂಡಲೇ ಬಡ್ಡಿ ಸಮೇತ ಗ್ರಾಹಕರಿಗೆ ಹಣ ಹಿಂದಿರುಗಿಸದಿದ್ದರೆ ಈಗ ನಡೆಸುತ್ತಿರುವ ಸ್ಥಳದಲ್ಲಿ ವಿಷ ಪ್ರಾಶನ ಮಾಡಿ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ರೈತ ಮುಖಂಡ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಪಟ್ಟಣದ ಸಹಕಾರಿ ಸಂಘಗಳ ಉಪ ನಿಬಂಧಕರ ಕಛೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಸರ್ಕಾರವಾಗಲಿ ಸಂಬಂಧಿಸಿದ ಇಲಾಖೆಗಳಾಗಲಿ ಸ್ಪಂದಿಸಿಲ್ಲ. ಇದನ್ನು ಖಂಡಿಸಿ ಸೋಮವಾರದಂದು ಕತ್ತೆ ಚಳುವಳಿ ನಡೆಸಲು ಮುಂದಾಗಿದ್ದರೆ ಅದಕ್ಕೂ ಪೊಲೀಸ್ ಇಲಾಖೆ ತಡೆಯೊಡ್ಡಿದರು. ಕತ್ತೆಯ ಮಾಲೀಕನಿಗೆ ಅಂಜಿಸಿ ಓಡಿಸಿದರು. ಒಟ್ಟಾರೆ ಇದರಲ್ಲಿ ರಾಜಕೀಯ ಹುನ್ನಾರ ಅಡಗಿದೆ. ಆದ್ದರಿಂದಲೇ ಗ್ರಾಹಕರ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದಾರೆಂದು ಧರಣಿ ನೇತೃತ್ವ ವಹಿಸಿದ ರೈತ ಮುಖಂಡ ಅರವಿಂದ ಕುಲಕರ್ಣಿ ಆರೋಪಿಸಿದರು.
ಕತ್ತೆ ಚಳುವಳಿ ಹತ್ತಿಕ್ಕಿರುವ ಕಾರಣ ಆರಮಣದ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಲು ತೀರ್ಮಾನಿಸಲಾಯಿತು. ಮಂಗಳವಾರದಿಂದ ಇಬ್ಬರು ಗ್ರಾಹಕರಾದ ಶ್ರೀಮಂತ ಹೊನ್ನಕಾಂಬಳೆ ಹಾಗೂ ನಾರಾಯಣ ವಿಧಾತೆ ಎಂಬ ಗ್ರಾಹಕರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಹಣ ಹಿಂದಿರುಗಿಸುವವರೆಗೂ ಆಮರಣ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರೆಯುವ ಪ್ರಶ್ನೆ ಇಲ್ಲವೆಂದು ಇಬ್ಬರು ಗ್ರಾಹಕರು ಸ್ಪಷ್ಟಪಡಿಸಿದ್ದಾರೆ.
ಉಪವಾಸ ಸತ್ಯಾಗ್ರಹ ನಿರತರಿಗೆ ಏನಾದರೂ ಜೀವಕ್ಕೆ ಅಪಾಯವಾದಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖಂಡ ಅರವಿಂದ ಕುಲಕರ್ಣಿ ಎಚ್ಚರಿಸಿದ್ದಾರೆ.
ಧರಣಿಯಲ್ಲಿ ಶಿವಪ್ಪ ಚಂದಾನವರ, ಎಂ.ಎಂ.ಜಾಲಗೇರಿ, ಮಕ್ಬುಮ್‍ಸಾಬ ಕೊರಬು, ಕಲ್ಲಪ್ಪ ಶಿನ್ನೂರ, ಬಸಪ್ಪ ಮಳವಾಡ, ಡಿ.ಸಿ.ಕವೇಟಕರ, ಕಲ್ಲಪ್ಪ ಗುಳೇದ, ಶಾಂತವ್ವ ರಂಜಣಗಿ, ರಾಜೇಶ್ವರ ಗೊರನಾಳ, ಚಂದಪ್ಪ ಮಾವಡಿ, ಐ.ಬಿ.ಸಾರವಾಡ, ಎನ್.ಕೆ.ಮನಗೊಂಡ, ಬಸವರಾಜ ಅವಟಿ, ಕೆ.ಡಿ.ನರಗುಂದಿ, ಇದ್ದರು.